Site icon Vistara News

ಸಹಕಾರಿ ಸೊಸೈಟಿಗಳು ಇನ್ನು ಮುಂದೆ ಸರ್ಕಾರಿ ಇ-ಮಾರ್ಕೆಟ್‌ನಲ್ಲಿ ಖರೀದಿಸಬಹುದು

e commerce

ನವದೆಹಲಿ: ಕೇಂದ್ರ ಸರ್ಕಾರ ತನ್ನ ಇ-ಮಾರ್ಕೆಟ್ (GeM) ವ್ಯಾಪ್ತಿಯನ್ನು ವಿಸ್ತರಿಸಿದ್ದು, ಇನ್ನು ಮುಂದೆ ನೋಂದಾಯಿತ ಸಹಕಾರಿ ಸೊಸೈಟಿಗಳು ಖರೀದಿದಾರರಾಗಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ. ಈ ಕುರಿತ ಪ್ರಸ್ತಾಪವನ್ನು ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಕೇಂದ್ರ ಸರ್ಕಾರದ ಈ ನಡೆಯಿಂದ 8.54 ಲಕ್ಷ ಸಹಕಾರಿ ಸೊಸೈಟಿಗಳಿಗೆ ಸಹಕಾರಿಯಾಗಲಿದೆ. ಇವುಗಳಲ್ಲಿನ 27 ಕೋಟಿ ಸದಸ್ಯರಿಗೆ ಪ್ರಯೋಜನವಾಗಲಿದೆ. ಏಕೆಂದರೆ ಈ ಸಹಕಾರಿಗಳು ಸರಕಾರಿ ಇ-ಮಾರ್ಕೆಟ್‌ ನಿಂದ ಸ್ಪರ್ಧಾತ್ಮಕ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು. ಈ ಸಹಕಾರಿ ಸೊಸೈಟಿಗಳು ನಾನಾ ಬಗೆಯ ಸರಕು ಮತ್ತು ಸೇವೆಗಳ ವಹಿವಾಟುಗಳನ್ನು ನಡೆಸುತ್ತಿವೆ.

ಕೇಂದ್ರ ಸಹಕಾರ ಇಲಾಖೆಯು ಸಹಕಾರ ಸೊಸೈಟಿಗಳ ಬಲವರ್ಧನೆಗೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಿದೆ. GeM ಪೋರ್ಟಲ್‌ನಲ್ಲಿ ನೋಂದಣಿಯಾಗುವುದರಿಂದ ಸೊಸೈಟಿಗಳಿಗೆ ಆರ್ಥಿಕವಾಗಿಯೂ ಪ್ರಯೋಜನವಾಗಲಿದೆ.

ಸರ್ಕಾರ 2017ರಲ್ಲಿ ಈ ವೆಬ್‌ ಪೋರ್ಟಲ್‌ ಅನ್ನು ಆರಂಭಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲ ಇಲಾಖೆಗಳು, ಸಚಿವಾಲಯಗಳು, ಸಾರ್ವಜನಿಕ ಸಂಸ್ಥೆಗಳು ಇದರ ಮೂಲಕ ನಾನಾ ಸರಕು ಮತ್ತು ಸೇವೆಗಳನ್ನು ಖರೀದಿಸಬಹುದು.

ಇದೀಗ ಸಹಕಾರಿ ಸೊಸೈಟಿಗಳನ್ನು ಖರೀದಿದಾರ ಎಂದು ವೆಬ್‌ ಪೋರ್ಟಲ್‌ ನಲ್ಲಿ ನೋಂದಣಿ ಮಾಡಿರುವುದರಿಂದ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಈ ಪೋರ್ಟಲ್‌ ಮೂಲಕ ಸೊಸೈಟಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

Exit mobile version