ಹೂವಪ್ಪ ಐ ಹೆಚ್.
ಬೆಂಗಳೂರು : ತೆಂಗಿನ ಕಾಯಿ ಹಾಗೂ ಉಂಡೆ ಕೊಬ್ಬರಿ ದರ ದಿಢೀರ್ ಕುಸಿತಕ್ಕೀಡಾಗಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ. ಹಬ್ಬದ ಸೀಸನ್ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ (Coconut price) ಉತ್ತರ ಭಾರತದಲ್ಲಿ ಉಂಡೆ ಕೊಬ್ಬರಿ, ಕೊಬ್ಬರಿ ಎಣ್ಣೆ ಮತ್ತು ಪುಡಿಗೆ ಬೇಡಿಕೆ ಇಳಿಮುಖವಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಕೊಬ್ಬರಿಯ ಸಗಟು ದರ 170-175 ರೂ.ಗಳಿಂದ 130-140 ರೂ.ಗೆ ಕುಸಿದಿದೆ. ಕಳೆದ ಜೂನ್-ಜುಲೈನಲ್ಲಿ ತಿಪಟೂರು, ಅರಸೀಕೆರೆ ಮೂಲದ ಉಂಡೆ ಕೊಬ್ಬರಿಗೆ ಕ್ವಿಂಟಾಲ್‌ಗೆ 16,000-16,500 ರೂ. ದರವಿತ್ತು. ಈಗ 4,000-4,500 ರೂ.ಗೆ ಕುಸಿದಿದೆ.
ಬಹುತೇಕ ಆಯಿಲ್ ಮಿಲ್‌ಗಳಲ್ಲಿ ಕೊಬ್ಬರಿ ದಾಸ್ತಾನು ಮಾಡುವುದನ್ನು ನಿಲ್ಲಿಸಲಾಗಿದೆ. ಜತೆಗೆ ತೆಂಗಿನಕಾಯಿ ಮತ್ತು ಕೊಬ್ಬರಿ ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 16,500 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ತಿಪಟೂರು, ಅರಸೀಕೆರೆ ಎಪಿಎಂಸಿಗೆ ತುಮಕೂರು, ಜಿಲ್ಲೆ ಹಾಗೂ ಇತರೆ ಜಿಲ್ಲೆಯ ರೈತರು ಕೊಬ್ಬರಿ ತರುತ್ತಾರೆ. ತಿಪಟೂರು, ಅರಸೀಕೆರೆ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಕೇರಳ ಮತ್ತು ತಮಿಳುನಾಡು ಕೊಬ್ಬರಿಗಿಂತ ಹೆಚ್ಚು ಮೌಲ್ಯ ಹೊಂದಿದೆ. ಆದರೆ ಕಳೆದ ಕೆಲವು ತಿಂಗಳಿಂದ ಹರಾಜಿನಲ್ಲಿ ಕೊಬ್ಬರಿ ಬೆಲೆ ದಿನೇ ದಿನ ಕುಸಿಯುತ್ತಿದ್ದು, ರೈತರಿಗೆ ಆತಂಕ ಉಂಟುಮಾಡಿದೆ.
ಕೊಬ್ಬರಿ ಎಣ್ಣೆ ತಯಾರಿಸಲು ಉಪಯೋಗಿಸುವ ಮಂಗಳೂರು, ಪುತ್ತೂರು ಮೂಲದ ಕೊಬ್ಬರಿಯ ಬೆಲೆ ಕೂಡಾ ಕುಸಿದಿದ್ದು, ಪ್ರತಿ ಕ್ವಿಂಟಾಲ್‌ಗೆ ದರ 14,00-15,000 ರೂ.ಗಳಿಂದ 9,000-9,500 ರೂ.ಗೆ ಕುಸಿತಕ್ಕೀಡಾಗಿದೆ.
ತೆಂಗಿನ ಕಾಯಿ ದರ ಇಳಿಕೆ
ಕೇರಳ, ತಮಿಳುನಾಡಿನಲ್ಲಿ ತೆಂಗಿನಕಾಯಿಯ ಉತ್ಪಾದನೆ ಹೆಚ್ಚಿದೆ. ಹೀಗಾಗಿ ಕರ್ನಾಟಕದಲ್ಲಿ ತೆಂಗಿನಕಾಯಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು ಎಪಿಎಂಸಿಯಲ್ಲಿ ತೆಂಗಿನ ಕಾಯಿಯ ದರ ಪ್ರತಿ ಕ್ವಿಂಟಾಲ್‌ಗೆ 28,000 ರೂ.ಗಳಿಂದ 30,000 ರೂ.ಗೆ ಇಳಿಕೆಯಾಗಿದೆ. ಸಾಮಾನ್ಯ ಗಾತ್ರದ ಒಂದು ತೆಂಗಿನ ಕಾಯಿ ದರ 25-26 ರೂ.ಗಳಿಂದ 20-22 ರೂ.ಗೆ ತಗ್ಗಿದೆ.