ನವ ದೆಹಲಿ: ಅವೀಕ್ ಮಿಶ್ರಾ ೧೧ ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಯುದ್ಧ ನೌಕೆಗಳ ನಿರ್ವಹಣೆಯನ್ನು ಮಾಡುವ ಅಧಿಕಾರಿಯಾಗಿದ್ದರು. ವಿಶಿಷ್ಟ ಕರಿಯರ್ ಅನುಭವದೊಂದಿಗೆ ತಮ್ಮ ೩೫ನೇ ವಯಸ್ಸಿನಲ್ಲಿ ನೌಕಾಪಡೆಯಿಂದ ನಿವೃತ್ತರಾದರು. ಬಳಿಕ ಸುಮ್ಮನಿರಲಿಲ್ಲ. ನಿರುದ್ಯೋಗವಂತೂ ಕಾಡಲಿಲ್ಲ. ಆರ್‌ಪಿಜಿ ಗ್ರೂಪ್‌ನ ಕೆಇಸಿ ಇಂಟರ್‌ನ್ಯಾಶನಲ್ ಎಂಬ ಕಂಪನಿಯಲ್ಲಿ ಒಳ್ಳೆಯ ಹುದ್ದೆ ಗಳಿಸಿದರು. ಮಿಲಿಟರಿಯಲ್ಲಿ ಇದ್ದಾಗ ಅವರು ಗಳಿಸಿದ್ದ ವಿಶಿಷ್ಟ ವೃತ್ತಿಪರ ಅನುಭವ ಅವರ ಭವಿಷ್ಯವನ್ನು ರೂಪಿಸಿತ್ತು. ಏಕೆಂದರೆ ಕೆಇಸಿಯು ಭಾರತೀಯ ವಾಯುಸೇನೆಗೆ ಹಲವು ಪ್ರಾಜೆಕ್ಟ್‌ಗಳನ್ನು ಮಾಡಿಕೊಟ್ಟಿದೆ. ಅದರ ಮೇಲುಸ್ತುವಾರಿಯನ್ನು ಮಿಶ್ರಾ ನಿರ್ವಹಿಸುತ್ತಾರೆ. ಹಲವಾರು ಸ್ಮಾರ್ಟ್ ಸಿಟಿ ಯೋಜನೆಗಳಲ್ಲೂ ಕಂಪನಿಯ ಕೆಲಸಗಳನ್ನು ಅವರು ಮಾಡುತ್ತಾರೆ.
ಇಂಥ ಅನೇಕ ಉದಾಹರಣೆಗಳನ್ನು ಈಗ ನೋಡಬಹುದು. ಇತ್ತೀಚೆಗೆ ಅಗ್ನಿಪಥ್ ಯೋಜನೆಯಲ್ಲಿ ಸೇನೆಯಿಂದ ನಿವೃತ್ತರಾಗುವ ಯುವಕರಿಗೆ (ಅಗ್ನಿವೀರರು) ಯಾರು ಕೆಲಸ ಕೊಡುತ್ತಾರೆ ಎಂಬ ಪ್ರಶ್ನೆ ಭಾರಿ ಚರ್ಚೆಗೀಡಾಗಿತ್ತು. ಆದರೆ ಅಗ್ನಿಪಥ್ ಆರಂಭಕ್ಕೂ ಮುನ್ನವೇ, ಕಾರ್ಪೊರೇಟ್ ವಲಯದಲ್ಲಿ ಮಿಲಿಟರಿಯಿಂದ ನಿವೃತ್ತರಾದವರಿಗೆ ನಾನಾ ಉದ್ಯೋಗಾವಕಾಶಗಳು ಲಭಿಸುತ್ತಿವೆ ಎಂಬುದು ಗಮನಾರ್ಹ.
ಪ್ರಾಮಾಣಿಕತೆ, ಶಿಸ್ತು, ಸಮಗ್ರತೆ, ಕೌಶಲಕ್ಕೆ ಬೇಡಿಕೆ
ಸೇನೆಯಲ್ಲಿ ಕೆಲಸ ಮಾಡಿದವರಲ್ಲಿ ಪ್ರಾಮಾಣಿಕತೆ, ಶಿಸ್ತು, ಸಮಗ್ರತೆ, ಪರಿಶ್ರಮ, ವಿಶಿಷ್ಟ ಕೌಶಲಗಳು ಮೇಳೈಸಿರುತ್ತವೆ. ಕಾರ್ಪೊರೇಟ್ ಸಂಸ್ಕೃತಿಯಲ್ಲೂ ಈ ಎಲ್ಲ ಅಂಶಗಳಿಗೆ ಪ್ರಾಧಾನ್ಯತೆ ಇದೆ. ಹೀಗಾಗಿ ಸೇನೆಯಿಂದ ನಿವೃತ್ತರಾಗುವವರಿಗೆ ಇಲ್ಲಿ ಉದ್ಯೋಗಾವಕಾಶಗಳೂ ದೊರೆಯುತ್ತವೆ. ಸೇನೆಯಿಂದ ಪ್ರತಿ ವರ್ಷ ೬೦,೦೦೦-೭೦,೦೦೦ ಮಂದಿ ನಿವೃತ್ತರಾಗುತ್ತಾರೆ. ಅವರಿಗೆ ೪೦ ವರ್ಷ ಆಸುಪಾಸಿನ ವಯಸ್ಸಾಗಿರುತ್ತದೆ.
ಮಹೀಂದ್ರಾ ಗ್ರೂಪ್, ಆರ್‌ಪಿಜಿ, ಹೀರೊ ಮೊಟೊಕಾರ್ಪ್, ಸೊಡೆಕ್ಸೊ, ಮಾರುತಿ ಸುಜುಕಿ ಮೊದಲಾದ ದಿಗ್ಗಜ ಕಂಪನಿಗಳಲ್ಲಿ ಸೇನೆಯಿಂದ ನಿವೃತ್ತರಾದವರನ್ನು ನೇಮಕಾತಿ ಮಾಡಿಕೊಳ್ಳಳಾಗಿದೆ. ಹಾಗೂ ಈ ಟ್ರೆಂಡ್ ಬೆಳೆಯುತ್ತಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ, ಶಿಸ್ತು, ಸಮಗ್ರತೆ ಇವರಲ್ಲೆ ಸಹಜವಾಗಿ ಇರುವುದು ಇದಕ್ಕೆ ಕಾರಣ.
ಒಂದು ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಾಗ ಸೇನೆಯಲ್ಲಿ ನಿವೃತ್ತ ಸಿಬ್ಬಂದಿ ಆಗಿದ್ದರೆ ಯಾವುದೇ ಸಂದರ್ಭದಲ್ಲಿ ವಿಚಲಿತರಾಗದೆ, ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬುದು ಆರ್‌ಪಿಜೆ ಗ್ರೂಪ್ ಅಧ್ಯಕ್ಷ ಹರ್ಷ ಗೋಯೆಂಕಾ ಅವರ ಅಭಿಪ್ರಾಯ.
ಯಾವ ಉದ್ದಿಮೆಯಲ್ಲಿ ಬೇಡಿಕೆ?
ಆಟೊಮೊಬೈಲ್, ಟೆಲಿಕಾಂ, ವಿದ್ಯುತ್, ಉತ್ಪಾದನೆ, ಏರೊಸ್ಪೇಸ್ ವಲಯದ ಕಂಪನಿಗಳು ಮಿಲಿಟರಿಯಿಂದ ನಿವೃತ್ತರಾದವರನ್ನು ನೇಮಕ ಮಾಡಿಕೊಳ್ಳುತ್ತಿವೆ. ಇ-ಕಾಮರ್ಸ್, ಲಾಜಿಸ್ಟಿಕ್ಸ್, ವೇರ್ ಹೌಸ್ ವಲಯದಲ್ಲೂ ಅವರಿಗೆ ಬೇಡಿಕೆ ಹೆಚ್ಚುತ್ತಿದೆ.