Site icon Vistara News

Company FD rates : ಕಂಪನಿ ಎಫ್‌ಡಿ ಬಡ್ಡಿ 8% ಕ್ಕೂ ಹೆಚ್ಚು, ಈಗ ಇನ್ವೆಸ್ಟ್‌ ಮಾಡಬಹುದೇ?

cash

ಬ್ಯಾಂಕ್‌ಗಳಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿ ದರಗಳು ಇಳಿಯಲು ಆರಂಭವಾಗಿದೆ. ಕಂಪನಿ ಫಿಕ್ಸೆಡ್‌ ಡೆಪಾಸಿಟ್‌ಗಳು ಅನ್‌ಸೆಕ್ಯೂರ್ಡ್‌ ಇನ್ವೆಸ್ಟ್‌ಮೆಂಟ್‌ ಯೋಜನೆಗಳಾಗಿವೆ. (Company FD rates ) ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ಸ್‌ (small finance banks) ಹೊರತುಪಡಿಸಿದರೆ, ಬ್ಯಾಂಕ್‌ ಫಿಕ್ಸೆಡ್‌ ಡೆಪಾಸಿಟ್‌ಗಳ ಬಡ್ಡಿ ದರಗಳು ಇಳಿಕೆಯಾಗುತ್ತಿವೆ. ಎರಡು ವರ್ಷಗಳ ಬ್ಯಾಂಕ್‌ ಎಫ್‌ಡಿ ದರ 8 ಪರ್ಸೆಂಟ್‌ನಿಂದ 7.75%ಕ್ಕೆ ತಗ್ಗಿದೆ.

ಡಿಸಿಬಿ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಇತ್ತೀಚೆಗೆ ಇಳಿಸಿವೆ. ಈ ರೀತಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿ ದರಗಳಿ ಇಳಿಯುತ್ತಿರುವುದರಿಂದ ಹೂಡಿಕೆದಾರರು ಉತ್ತಮ ಹೂಡಿಕೆಯ ಪರ್ಯಾಯ ಆಯ್ಕೆಯನ್ನು ಹುಡುಕುತ್ತಿದ್ದಾರೆ. ಈಗ ಎಎಎ-ರೇಟಿಂಗ್‌ ಇರುವ ಕಂಪನಿ ಎಫ್‌ಡಿಗಳು 8 ಪರ್ಸೆಂಟ್‌ಗೂ ಹೆಚ್ಚು ಆದಾಯವನ್ನು ನೀಡುತ್ತದೆ. ಹಿರಿಯ ನಾಗರಿಕರು 0.25% ಹೆಚ್ಚಿನ ಬಡ್ಡಿ ದರ ಗಳಿಸುತ್ತಿದ್ದಾರೆ. ಕಂಪನಿಯಿಂದ ಕಂಪನಿಗೆ ಇದು ಭಿನ್ನವಾಗಿದೆ.

ಹೀಗಿದ್ದರೂ, ಕಾರ್ಪೊರೇಟ್‌ ಎಫ್‌ಡಿಗಳು ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು ರಿಸ್ಕ್‌ ಅನ್ನು ಒಳಗೊಂಡಿರುತ್ತದೆ. ಹಾಗಾದರೆ ಹೂಡಿಕೆದಾರರು ಹೂಡಿಕೆಗೆ ಮುನ್ನ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆಯ ಕ್ರಮಗಳೇನು? ಏನು ಮಾಡಬೇಕು? ಏನನ್ನು ಮಾಡಬಾರದು? ಇಲ್ಲಿದೆ ವಿವರ.

ಕಂಪನಿ ಎಫ್‌ಡಿ ವಿಶೇಷತೆ: ಕಂಪನಿ ಡೆಪಾಸಿಟ್‌ಗಳು ಅನ್‌ ಸೆಕ್ಯೂರ್ಡ್‌ ಹೂಡಿಕೆಯ ಸಾಧನಗಳಾಗಿವೆ. ನಿಗದಿತ ಆದಾಯ ಕೊಡುತ್ತವೆ. ಉತ್ಪಾದನಾ ವಲಯದ ಕಂಪನಿಗಳು ಮತ್ತು ನಾನ್-ಬ್ಯಾಂಕಿಂಗ್‌ ಫೈನಾನ್ಸ್‌ ಕಂಪನಿಗಳು (NBFC) ನೀಡುತ್ತವೆ. ನಾನಾ ಅವಧಿಗಳಿಗೆ ಹಾಗೂ ಭಿನ್ನ ಬಡ್ಡಿ ದರಗಳಲ್ಲಿ ಎಫ್‌ಡಿ ಸೌಲಭ್ಯ ನೀಡುತ್ತವೆ. ಕಾರ್ಪೊರೇಟ್‌ ಎಫ್‌ಡಿಗಳು ಬ್ಯಾಂಕ್‌ ಎಫ್‌ಡಿಗಿಂತ ಸಾಮಾನ್ಯವಾಗಿ 0.75%-1.5% ಹೆಚ್ಚು ಬಡ್ಡಿಯನ್ನು ಕೊಡುತ್ತವೆ ಎನ್ನುತ್ತಾರೆ ಸ್ಟೇಬಲ್‌ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಸೌರಭ್‌ ಜೈನ್.‌ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಬಡ್ಡಿ ದರ ಜಮೆ ಮಾಡುತ್ತವೆ.

ಕೇವಲ ಬಡ್ಡಿ ದರ ಮಾತ್ರ ಗಮನಿಸದಿರಿ: ಕಾರ್ಪೊರೇಟ್‌ ಎಫ್‌ಡಿಗಳು ಅನ್‌ ಸೆಕ್ಯೂರ್ಡ್‌ ಆಗಿದ್ದು, ಯಾವುದೇ ಕೊಲಾಟರಲ್‌ ಬೆಂಬಲ ಇರುವುದಿಲ್ಲ. ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು ರಿಸ್ಕ್‌ ಅನ್ನು ಒಳಗೊಂಡಿರುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿಯಂತ್ರಿಸುತ್ತದೆ. ಅಂಥ ನಿಯಂತ್ರಕ ಯಾವುದೇ ಕಂಪನಿಯ ಎಫ್‌ಡಿಗೆ ಇರುವುದಿಲ್ಲ. ಕಂಪನಿಗಳ ಕಾಯಿದೆ ಅಡಿಯಲ್ಲಿ ಅದು ಬರುತ್ತದೆ. ಬ್ಯಾಂಕ್‌ ಎಫ್‌ಡಿಗೆ 5 ಲಕ್ಷ ರೂ. ತನಕ ವಿಮೆ ಇರುತ್ತದೆ. ಕಂಪನಿ ಎಫ್‌ಡಿಗೆ ಅದೂ ಇರುವುದಿಲ್ಲ. ಅತಿ ದೊಡ್ಡ ರಿಸ್ಕ್‌ ಯಾವುದು ಎಂದರೆ ಕಾರ್ಪೊರೇಟ್‌ ಎಫ್‌ಡಿ ಕ್ರೆಡಿಟ್‌ ರಿಸ್ಕ್‌ ಅನ್ನು ಹೊಂದಿರುತ್ತದೆ. ಕಂಪನಿಯು ಠೇವಣಿದಾರರಿಗೆ ಬಡ್ಡಿ (company FD) ಅಥವಾ ಅಸಲನ್ನು ಕೊಡಲು ಅಸಮರ್ಥವಾಗುವ ಅಪಾಯ ಇದೆ.

ಕ್ರೆಡಿಟ್‌ ರೇಟಿಂಗ್‌ ಗಮನಿಸಿ: ಕಾರ್ಪೊರೇಟ್‌ ಎಫ್‌ಡಿಗಳ ರಿಸ್ಕ್‌ ಪ್ರಮಾಣವನ್ನು ಅಳೆಯಲು ಕ್ರಿಸಿಲ್‌, ಕೇರ್‌ ಮತ್ತು ಐಸಿಆರ್‌ಎ ಇತ್ಯಾದಿ ರೇಟಿಂಗ್‌ ಏಜೆನ್ಸಿಗಳು ನಿಗದಿಪಡಿಸುವ ರೇಟಿಂಗ್ಸ್‌ ಅನ್ನು ಗಮನಿಸಿ. AAA ಅಥವಾ ಕನಿಷ್ಠ AA+ ರೇಟಿಂಗ್‌ ಇದ್ದರೆ ಹೂಡಿಕೆ ಮಾಡಿರಿ.

ಇದನ್ನೂ ಓದಿ: Money Changes : ಸೆಪ್ಟೆಂಬರ್‌ನಲ್ಲಿ 7 ಹಣಕಾಸು ಬದಲಾವಣೆಗಳನ್ನು ಮರೆಯದಿರಿ

ಫಿಕ್ಸೆಡ್‌ ಡೆಪಾಸಿಟ್‌ಗಳನ್ನು ನೀಡುವ ಕೆಲ ಕಂಪನಿಗಳ ಉದಾಹರಣೆಗಳು ಇಂತಿವೆ- ಶ್ರೀರಾಮ್‌ ಫೈನಾನ್ಸ್‌ , ಮಹೀಂದ್ರಾ ಫೈನಾನ್ಸ್‌, ಮಣಿಪಾಲ್‌ ಹೌಸಿಂಗ್‌ ಫೈನಾನ್ಸ್‌ ಸಿಂಡಿಕೇಟ್‌, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌, ಸುಂದರಂ ಹೋಮ್‌ ಫೈನಾನ್ಸ್‌, ಮುತ್ತೂಟ್‌ ಕ್ಯಾಪಿಟಲ್‌ ಸರ್ವೀಸ್‌, ಐಸಿಐಸಿಐ ಹೋಮ್‌ ಫೈನಾನ್ಸ್‌, ಕ್ಯಾನ್‌ ಫಿನ್‌ ಹೋಮ್ಸ್‌, ಬಜಾಜ್‌ ಫೈನಾನ್ಸ್‌, ಎಲ್‌ಐಸಿ ಹೌಸಿಂಗ್‌ ಫೈನಾನ್ಸ್.

Exit mobile version