Site icon Vistara News

Cooking oil price : ಅಡುಗೆ ಮನೆಯಲ್ಲಿ ಸಂಭ್ರಮ, ಸೋಯಾ, ಸೂರ್ಯಕಾಂತಿ ಎಣ್ಣೆ ದರ ಇಳಿಕೆ

sunflower oil

#image_title

ನವ ದೆಹಲಿ: ಭಾರತ ಬುಧವಾರ ಸಂಸ್ಕರಿತ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕದಲ್ಲಿ 17.5%ರಿಂದ 12.5%ಕ್ಕೆ ಇಳಿಕೆ ಮಾಡಿದೆ. ಇದರ ಪರಿಣಾಮ ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. (Cooking oil price) ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ. ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಖಾದ್ಯ ತೈಲ ಖರೀದಿದಾರ ರಾಷ್ಟ್ರವಾಗಿದೆ. ಅಂದಾಜು 5% ದರ ಇಳಿಕೆ ನಿರೀಕ್ಷಿಸಲಾಗಿದೆ.

ಭಾರತವು ಮುಖ್ಯವಾಗೊ ಸೋಯಾ ಎಣ್ಣೆಯನ್ನು ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ್‌, ಉಕ್ರೇನ್‌ ಮತ್ತು ರಷ್ಯಾದಿಂದ ಆಮದು ಮಾಡುತ್ತದೆ. ಇದರೊಂದಿಗೆ ಸಂಸ್ಕರಿತ ಅಡುಗೆ ಎಣ್ಣೆಯ ಮೇಲೆ ಎಫೆಕ್ಟಿವ್‌ ಸುಂಕ 13.7% ಕ್ಕೆ ನಿಗದಿಯಾಗಿದೆ. ಸರ್ಕಾರದ ನಿರ್ಧಾರದಿಂದ ತಾತ್ಕಾಲಿಕವಾಗಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು. ಆದರೆ ಆಮದು ಮೇಲೆ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು Solvent extractors association ಕಾರ್ಯಕಾರಿ ನಿರ್ದೇಶಕ ಬಿ.ವಿ ಮೆಹ್ತಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಭಾರತವು ಖಾದ್ಯ ತೈಲಗಳ ದರಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತದೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಇದು ಅಗತ್ಯ ಎನ್ನುತ್ತಾರೆ ತಜ್ಞರು. ಎಸ್‌ಇಎ ಪ್ರಕಾರ ಕೇರಳಕ್ಕೆ ಈ ವರ್ಷ ಮುಂಗಾರು ವಿಳಂಬವಾಗಿ ಪ್ರವೇಶಿಸಿದೆ. ಭಾರತ ತನ್ನ ಖಾದ್ಯ ತೈಲ ಬೇಡಿಕೆಯಲ್ಲಿ 60% ಅನ್ನು ಪೂರೈಸಲು ಆಮದನ್ನು ಅವಲಂಬಿಸಿದೆ.

ಆಮದು ಸುಂಕ ಕಡಿತದ ಪರಿಣಾಮ ಕಚ್ಚಾ ತಾಳೆ ಎಣ್ಣೆ, ಸೂರ್ಯಕಾಂತಿ ಸೇರಿ ಎಲ್ಲ ಖಾದ್ಯ ತೈಲಗಳ ದರಗಳಿ ಇಳಿಕೆಯಾಗಲಿದೆ. ಕಳೆದ ನವೆಂಬರ್‌ -ಏಪ್ರಿಲ್‌ ಅವಧಿಯಲ್ಲಿ ತಾಳೆ ಎಣ್ಣೆಯ ಆಮದು ಗಣನೀಯವಾಗಿ ಕುಸಿದಿತ್ತು. 49 ಲಕ್ಷ ಟನ್‌ ಅಡುಗೆ ಎಣ್ಣೆ ಆಮದಾಗಿತ್ತು. ಹೀಗಿದ್ದರೂ ಕಳೆದ ಎರಡು ತಿಂಗಳಿನಲ್ಲಿ ಆಮದು ಏರಿಕೆಯೂ ಆಗಿತ್ತು. ಭಾರತವು ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ಮುಖ್ಯವಾಗಿ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಭಾರತವು 2023ರ ಮಾರ್ಚ್‌ನಲ್ಲಿ 11.35 ಲಕ್ಷ ಟನ್‌ ಖಾದ್ಯತೈಲವನ್ನು ಆಮದು ಮಾಡಿತ್ತು. ಮೇನಲ್ಲಿ 4,39,173 ಟನ್‌ ತಾಳೆ ಎಣ್ಣೆ ಆಮದಾಗಿತ್ತು.

ದೇಶದಲ್ಲಿ ಸಗಟು ಹಣದುಬ್ಬರ (wholesale inflation) ಮೇನಲ್ಲಿ ಮೈನಸ್‌ 3.48%ಕ್ಕೆ ಇಳಿಕೆಯಾಗಿದೆ. ಕಳೆದ ಮೂರು ವರ್ಷದಲ್ಲಿಯೇ ಇದು ಕನಿಷ್ಠ ಮೊತ್ತವಾಗಿದೆ. ಏಪ್ರಿಲ್‌ನಲ್ಲಿ ಇದು -0.92% ಇತ್ತು. 2022ರ ಮೇನಲ್ಲಿ ಸಗಟು ಹಣದುಬ್ಬರ 16.63% ಇತ್ತು. ಆಹಾರ ವಸ್ತುಗಳು, ಇಂಧನ ಮತ್ತು ಉತ್ಪಾದಿತ ವಸ್ತುಗಳ ಬೆಲೆಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಗಟು ಹಣದುಬ್ಬರ ತಗ್ಗಿದೆ. ಮೇನಲ್ಲಿ ಆಹಾರ ವಸ್ತುಗಳ ಹಣದುಬ್ಬರ 1.51%ಕ್ಕೆ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಹಣದುಬ್ಬರ 3.54% ಇತ್ತು.

ಸಗಟು ದರ ಸೂಚ್ಯಂಕ ಸತತ ಎರಡನೇ ತಿಂಗಳಿಗೆ ಋಣಾತ್ಮಕ ಹಂತಕ್ಕೆ ಇಳಿದಿದೆ. ಮಿನರಲ್‌ ಆಯಿಲ್‌, ಬೇಸಿಕ್‌ ಮೆಟಲ್‌, ಕೆಮಿಕಲ್‌ ಪ್ರಾಡಕ್ಟ್ಸ್‌, ಜವಳಿ, ಆಹಾರೇತರ ವಸ್ತುಗಳ ದರ ಇಳಿಕೆಯಾಗಿದೆ. ಹೀಗಾಗಿ ಸಗಟು ಹಣದುಬ್ಬರ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ತಿಳಿಸಿದೆ. ಮೇನಲ್ಲಿ ಇಂಧನ ಮತ್ತು ವಿದ್ಯುತ್‌ ವಲಯದ ಸಗಟು ಹಣದುಬ್ಬರ ಮೈನಸ್‌ 9.17% ಕ್ಕೆ ಇಳಿಕೆಯಾಗಿದೆ. ಉತ್ಪಾದಿತ ವಸ್ತುಗಳ ಹಣದುಬ್ಬರ ಮೈನಸ್‌ 2.97%ಕ್ಕೆ ತಗ್ಗಿದೆ. ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿ ಅಡುಗೆ ಎಣ್ಣೆ ದರ ಕೂಡ ಪ್ರಭಾವ ಬೀರುತ್ತದೆ.

ಇದನ್ನೂ ಓದಿ: Mother Dairy: ಬಳಕೆದಾರರ ಮೇಲೆ ‘ಮದರ್ ಡೇರಿ’ ಮಮತೆ, ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ!

Exit mobile version