ನವ ದೆಹಲಿ: ಓಲಾ ತನ್ನ ೫೦೦ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸುವ ಸಾಧ್ಯತೆ ಇದೆ. ವೆಚ್ಚ ನಿಯಂತ್ರಣಕ್ಕಾಗಿ ಕಂಪನಿ ಯತ್ನಿಸುತ್ತಿರುವುದು ಇದಕ್ಕೆ ಕಾರಣ ಎಂದು ವರದಿಯಾಗಿದೆ.
ಓಲಾ ಕಂಪನಿ ಈಗ ಓಲಾ ಎಲೆಕ್ಟ್ರಿಕ್ ಘಟಕಕ್ಕೆ ಆದ್ಯತೆ ನೀಡುತ್ತಿದ್ದು, ವೆಚ್ಚ ನಿಯಂತ್ರಣದ ಭಾಗವಾಗಿ ಓಲಾದಲ್ಲಿ ಹುದ್ದೆಗಳನ್ನು ಕಡಿತಗೊಳಿಸಲು ಉದ್ದೇಶಿಸಿದೆ.
ಸಾಫ್ಟ್‌ಬ್ಯಾಂಕ್ ಬೆಂಬಲಿತ ಓಲಾದಲ್ಲಿ ಉದ್ಯೋಗಿಗಳ ಕಾರ್ಯವೈಖರಿಯ ಮೌಲ್ಯ ಮಾಪನ ಮಾಡಲು ಹಿರಿಯ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಅದರ ಆಧಾರದಲ್ಲಿ ೫೦೦ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಉದ್ದೇಶಿಸಿದೆ.
ಓಲಾ ಪ್ರಸ್ತುತ ೧,೧೦೦ ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು ಕಳೆದ ತಿಂಗಳು ತನ್ನ ಬಳಸಿದ ವಾಹನಗಳ ಮಾರಾಟ ವಿಭಾಗವನ್ನು ( Ola cars) ಮುಚ್ಚಿತ್ತು. ಓಲಾ ಕೆಫೆ, ಫುಡ್ ಪಾಂಡಾ, ಓಲಾ ಫುಡ್ಸ್ ಅನ್ನೂ ಕಂಪನಿ ಮುಚ್ಚಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಎಲೆಕ್ಟ್ರಿಕ್ ಕಾರು ವಿಭಾಗಕ್ಕೆ ಆದ್ಯತೆ ನೀಡಲು ಬಯಸಿದೆ.