ನವ ದೆಹಲಿ: ರೇಟಿಂಗ್ ಏಜೆನ್ಸಿ ಫಿಚ್ ಸಮೂಹದ ಅಧೀನ ಸಂಸ್ಥೆಯಾದ ಕ್ರೆಡಿಟ್‌ಸೈಟ್ಸ್ ಅದಾನಿ ಸಮೂಹ ಕುರಿತ ತನ್ನ ವರದಿಯಲ್ಲಿ ಲೆಕ್ಕಾಚಾರ ಕೆಲ ತಪ್ಪಾಗಿದೆ (Adani) ಎಂದು ಒಪ್ಪಿಕೊಂಡಿದೆ.
ಕಳೆದ ತಿಂಗಳು ಕ್ರೆಡಿಟ್ ಸೈಟ್ಸ್ ಪ್ರಕಟಿಸಿದ ವರದಿಯಲ್ಲಿ, ಅದಾನಿ ಸಮೂಹವು ಅತಿಯಾದ ಸಾಲವನ್ನು ಮಾಡಿದ್ದು, ಸಮೂಹದ ಕೆಲವು ಕಂಪನಿಗಳು ದಿವಾಳಿಯಾಗುವ ಸಂಭವ ಇದೆ ಎಂದೂ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್‌ನ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 94,000 ಕೋಟಿ ರೂ. ನಷ್ಟ ಉಂಟಾಗಿತ್ತು.
ಆದರೆ ಇದೀಗ ಕ್ರೆಡಿಟ್ ಸೈಟ್ಸ್, ಅದಾನಿ ಗ್ರೂಪ್‌ನ ಹಣಕಾಸು ಮತ್ತು ಇತರ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದು, ಅದಾನಿ ಟ್ರಾನ್ಸ್‌ಮಿಶನ್ ಮತ್ತು ಅದಾನಿ ಪವರ್‌ನ ಸಾಲದ ಲೆಕ್ಕಾಚಾರದ ತನ್ನ ವರದಿಯಲ್ಲಿ ಕೆಲ ಅಂಕಿ ಅಂಶಗಳು ತಪ್ಪಾಗಿವೆ ಎಂದು ತಿಳಿಸಿದೆ.
ಅದಾನಿ ಸಮೂಹದ ಆಡಳಿತ ಮಂಡಳಿಯ ಪ್ರಕಾರ, ಗ್ರೂಪ್‌ನ ಸಾಲಗಳು ನಿರ್ವಹಣೆ ಮಾಡಬಹುದಾದ ಮಟ್ಟದಲ್ಲಿವೆ. ಆಯಾ ವಲಯದ ಕಂಪನಿಗಳು ಉದ್ದಿಮೆಯ ಮಾನದಂಡದ ಪ್ರಕಾರ ಆರೋಗ್ಯಕರ ಸ್ಥಿತಿಯಲ್ಲಿವೆ ಎಂದು ಕ್ರೆಡಿಟ್ ಸೈಟ್ಸ್ ತಿಳಿಸಿದೆ.
ಅದಾನಿ ಟ್ರಾನ್ಸ್‌ಮಿಶನ್ ಆದಾಯ (ತೆರಿಗೆಗೆ ಮುನ್ನ) 52೦೦ ಕೋಟಿ ರೂ.ಗಳಾಗಿದೆ ಎಂದು ಕ್ರೆಡಿಟ್ ಸೈಟ್ಸ್ ತಿದ್ದುಪಡಿ ಮಾಡಿದೆ. ಈ ಹಿಂದೆ ೪೨೦೦ ಕೋಟಿ ರೂ. ಎಂದಿತ್ತು. ಅದಾನಿ ಪವರ್ ಹೊಂದಿರುವ ಸಾಲ ೪೮,೯೦೦ ಕೋಟಿ ರೂ. ಎಂದು ತಿದ್ದುಪಡಿ ಮಾಡಿದೆ. ಈ ಹಿಂದೆ ೫೮,೨೦೦ ಕೋಟಿ ರೂ. ಎಂದು ವರದಿ ಮಾಡಿತ್ತು.
ಇದನ್ನೂ ಓದಿ:ವಿಸ್ತಾರ Explainer | 2.30 ಲಕ್ಷ ಕೋಟಿ ರೂ. ಸಾಲದಲ್ಲಿ ಅದಾನಿ ಗ್ರೂಪ್, ಸ್ಫೋಟಕ ವರದಿಗೆ ಷೇರು ದರ ತತ್ತರ !