ನವ ದೆಹಲಿ: ಆಗಸ್ಟ್ ಮೊದಲ ವಾರದಲ್ಲಿ ಭಾರತದ ಸರಾಸರಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ೧೦೦ ಡಾಲರ್‌ಗಿಂತ ಕೆಳಕ್ಕಿಳಿದಿದ್ದು, ೯೯.೭೫ ಡಾಲರ್‌ಗೆ ತಗ್ಗಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ಮಾರ್ಚ್‌ನಲ್ಲಿ ಸರಾಸರಿ ಆಮದು ವೆಚ್ಚ ೧೧೨.೮೭ ಡಾಲರ್‌ಗೆ ಏರಿತ್ತು. ಜೂನ್‌ನಲ್ಲಿ ೧೧೬ ಡಾಲರ್‌ಗೆ ಜಿಗಿದಿತ್ತು. ಇದೀಗ ೯೯.೭೫ ಡಾಲರ್‌ಗೆ ಇಳಿದಿರುವುದರಿಂದ ತೈಲ ಸಂಸ್ಕರಣೆ ಕಂಪನಿಗಳಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ಹೀಗಿದ್ದರೂ, ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು ಈಗಲೂ ಡೀಸೆಲ್ ಮಾರಾಟದಲ್ಲಿ ಭಾರಿ ನಷ್ಟ ಅನುಭವಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು ಡೀಸಲ್ ಮಾರಾಟದಲ್ಲಿ ಪ್ರತಿ ಲೀಟರ್‌ಗೆ ೧೦ ರೂ. ನಷ್ಟ ಅನುಭವಿಸುತ್ತಿವೆ. ಪೆಟ್ರೋಲ್‌ನಲ್ಲಿ ನಷ್ಟ ಇಲ್ಲ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇದಕ್ಕೆ ಕಾರಣ.
ಸಾರ್ವಜನಿಕ ವಲಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ ( ಬಿಪಿಸಿಎಲ್) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( ಎಚ್‌ಪಿಸಿಎಲ್) ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಪೆಟ್ರೋಲ್-ಡೀಸೆಲ್ ದರ ನಿಗದಿಪಡಿಸುವ ಸ್ವಾತಂತ್ರ್ಯ ಹೊಂದಿದ್ದರೂ, ಆರ್ಥಿಕ ಮತ್ತು ರಾಜಕೀಯ ಕಾರಣಕ್ಕಾಗಿ ಸರ್ಕಾರ ಇಂಧನ ದರಗಳ ಮೇಲೆ ತನ್ನ ನಿಯಂತ್ರಣವನ್ನು ಹೊಂದಿದೆ. ಸಾರ್ವಜನಿಕ ವಲಯದ ಮೂರೂ ಕಂಪನಿಗಳು ಹಣದುಬ್ಬರ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ೭ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದ ದಿನವಹಿ ಪರಿಷ್ಕರಣೆಯನ್ನು ಸ್ಥಗಿತಗೊಳಿಸಿವೆ.
ಎಚ್‌ಪಿಸಿಎಲ್ ಶನಿವಾರ ಪ್ರಕಟಿಸಿದ ತನ್ನ ಏಪ್ರಿಲ್-ಜೂನ್ ೨೦೨೨ರ ತ್ರೈಮಾಸಿಕ ಫಲಿತಾಂಶದಲ್ಲಿ ೧೦,೧೯೬ ಕೋಟಿ ರೂ. ನಷ್ಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧,೭೯೫ ಕೋಟಿ ರೂ. ಲಾಭ ಗಳಿಸಿತ್ತು. ಬಿಪಿಸಿಎಲ್ ಏಪ್ರಿಲ್-ಜೂನ್ ೨೦೨೨ರ ತ್ರೈಮಾಸಿಕ ಫಲಿತಾಂಶದಲ್ಲಿ ೬,೨೯೦ ಕೋಟಿ ರೂ. ನಷ್ಟಕ್ಕೀಡಾಗಿದೆ.