ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗಳ ಗಡಿಯನ್ನು ದಾಟಿದೆ. ಇದರಿಂದ ಭಾರತದಂಥ ಪ್ರಮುಖ ತೈಲ ಆಮದು ರಾಷ್ಟ್ರಕ್ಕೆ ಸವಾಲಾಗಿ ಪರಿಣಮಿಸಿದೆ.
ರಷ್ಯಾದಿಂದ 2022ರ ಅಂತ್ಯದ ವೇಳೆಗೆ ಕಚ್ಚಾ ತೈಲ ಆಮದನ್ನು ಶೇ.90ರಷ್ಟು ಸ್ಥಗಿತಗೊಳಿಸಲು ಐರೋಪ್ಯ ಒಕ್ಕೂಟ ಸಮ್ಮತಿಸಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 120 ಡಾಲರ್‌ಗಳ ಗಡಿ ದಾಟಿತು. ಯುರೋಪ್ ರಷ್ಯಾದಿಂದ ತೈಲ ಆಮದು ಕಡಿತಗೊಳಿಸಿದರೆ ಅಥವಾ ಸ್ಥಗಿತಗೊಳಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ತೈಲಕ್ಕೆ ಯರೋಪಿನಿಂದ ಬೇಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜುಲೈ ತಿಂಗಳಿನ ವಾಯಿದಾ ವಹಿವಾಟಿನಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 122 ಡಾಲರ್‌ಗೆ ಜಿಗಿದಿದೆ. ಚೀನಾದಲ್ಲಿ ಕೋವಿಡ್ ಉಪಶಮನವಾಗಿದ್ದು, ದೊಡ್ಡ ನಗರಗಳಲ್ಲಿ ನಿರ್ಬಂಧಗಳು ತೆರವಾಗುತ್ತಿವೆ. ಆದ್ದರಿಂದ ತೈಲಕ್ಕೆ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ. 2020ರ ಮಾರ್ಚ್‌ನಲ್ಲಿ 100 ಡಾಲರ್‌ಗೆ ತೈಲ ದರ ಏರಿತ್ತು.
ಕಚ್ಚಾ ತೈಲ ದರ ಜಿಗಿತ ಹೀಗೆ (ಪ್ರತಿ ಬ್ಯಾರೆಲ್‌ಗೆ ಡಾಲರ್‌ಗಳಲ್ಲಿ ದರ)
2021 ಡಿಸೆಂಬರ್ | 74 |
2022 ಜನವರಿ | 86 |
ಫೆಬ್ರವರಿ | 97 |
ಮಾರ್ಚ್ | 117 |
ಏಪ್ರಿಲ್ | 104 |
ಮೇ | 120 |
ಹೀಗಿದ್ದರೂ, ಈಗಾಗಲೇ ರಷ್ಯಾದಿಂದ ಯುರೋಪ್‌ಗೆ ತೈಲ ರಫ್ತು ಇಳಿಕೆಯಾಗಿದ್ದು, ಆಮದು ಕಡಿತದಿಂದ ಅಂಥ ದರ ಏರಿಕೆ ಆಗದು ಎಂಬ ವಾದವೂ ಇದೆ.
ಭಾರತಕ್ಕೆ ರಷ್ಯಾದಿಂದ ತೈಲ ಆಮದು ಹೆಚ್ಚಳ
ರಷ್ಯಾವು ಕಳೆದ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ದಾಳಿ ನಡೆಸಿದ ಬಳಿಕ ಇಲ್ಲಿಯವರೆಗೆ ಭಾರತ 34 ದಶಲಕ್ಷ ಬ್ಯಾರೆಲ್ (3.4 ಕೋಟಿ ) ಕಚ್ಚಾ ತೈಲವನ್ನು ಆಮದು ಮಾಡಿದೆ ಎಂದು ರಿಫಿನಿಟಿವ್ ಎಕಾನ್ ಸಂಸ್ಥೆಯ ವರದಿ ತಿಳಿಸಿದೆ. 2021ರ ಇದೇ ಅವಧಿಗೆ ಹೋಲಿಸಿದರೆ ಮೂರು ಪಟ್ಟು ವೃದ್ಧಿಸಿದೆ.
ರಷ್ಯಾದಿಂದ ಸಿಪಿಸಿ ಬ್ಲೆಂಡ್ ಕಚ್ಚಾ ತೈಲವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ. ಬ್ಲ್ಯಾಕ್‌ಸೀ ಬಂದರು ಮೂಲಕ ಇದು ರಫ್ತಾಗುತ್ತಿದೆ. ಭಾರತವು ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆ ಹಾಗೂ ವಿಶ್ವದ ಮೂರನೇ ದೊಡ್ಡ ತೈಲ ಆಮದುದಾರ ದೇಶವಾಗಿದೆ. ರಷ್ಯಾದ ಉರಲ್ ಮಾದರಿಯ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 120 ರೂ.ಗಳ ಗಡಿ ದಾಟಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಕಚ್ಚಾ ತೈಲ ಆಮದು ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:OIL PRICES RISE: ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 113 ಡಾಲರ್‌ಗೆ ಜಿಗಿತ