ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ೫% ಇಳಿಕೆಯಾಗಿದೆ. (oil price) ಕಳೆದ ೬ ತಿಂಗಳಿನ ಕನಿಷ್ಠ ಮಟ್ಟಕ್ಕೆ ದರ ತಗ್ಗಿದೆ. ಚೀನಾದ ಆರ್ಥಿಕತೆಯ ಮಂದಗತಿ ಕುರಿತ ಅಂಕಿ ಅಂಶಗಳು ಪ್ರಕಟವಾದ ಬೆನ್ನಲ್ಲೇ ಕಚ್ಚಾ ತೈಲ ದರ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರ ಮಂಗಳವಾರ ಪ್ರತಿ ಬ್ಯಾರೆಲ್‌ಗೆ ೯೪.೨೦ ಡಾಲರ್‌ಗೆ ತಗ್ಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯೂ ತೈಲ ದರವನ್ನು ತಗ್ಗಿಸಿದೆ. ಹೀಗಿದ್ದರೂ, ದರ ಇಳಿಕೆಯಾಗುತ್ತಿರುವುದು ಭಾರತಕ್ಕೆ ಅನುಕೂಲಕರವಾಗಲಿದೆ. ಏಕೆಂದರೆ ಭಾರತ ತನ್ನ ಅಗತ್ಯಕ್ಕಾಗಿ ತೈಲದ ಆಮದನ್ನು ಬಹುವಾಗಿ ನೆಚ್ಚಿಕೊಂಡಿದೆ. ವಾಯಿದಾ ವಹಿವಾಟಿನಲ್ಲಿ ಕಚ್ಚಾ ತೈಲ ದರದಲ್ಲಿ ೩% ಇಳಿಕೆಯಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ೨೦೨೨ರಲ್ಲಿ ಕಚ್ಚಾ ತೈಲ ದರ ಸ್ಫೋಟ ಸಂಭವಿಸಿತ್ತು. ಕಳೆದ ಫೆಬ್ರವರಿಯಲ್ಲಿ ಪ್ರತಿ ಬ್ಯಾರೆಲ್‌ಗೆ ೧೪೦ ಡಾಲರ್‌ಗೆ ದರ ಏರಿಕೆಯಾಗಿತ್ತು. ವಿಶ್ವದ ನಾನಾ ದೇಶಗಳಲ್ಲಿ ಹಣದುಬ್ಬರಕ್ಕೆ ಇದು ಕಾರಣವಾಗಿತ್ತು. ಆದರೆ ಇತ್ತೀಚಿನ ವಾರಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಇಳಿಕೆಯಾಗುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ದೇಶದ ಆರ್ಥಿಕತೆಯ ಚೇತರಿಕೆ ಸಲುವಾಗಿ ಬಡ್ಡಿ ದರವನ್ನು ತಗ್ಗಿಸಿದೆ. ಬ್ಲೂಮ್ ಬರ್ಗ್ ರಕಾರ ಜುಲೈನಲ್ಲಿ ಚೀನಾದ ಕಚ್ಚಾ ತೈಲ ಬೇಡಿಕೆಯಲ್ಲಿ ೯.೭% ಇಳಿಕೆಯಾಗಿದೆ.
ಇರಾನ್‌ನಿಂದಲೂ ತೈಲ ಪೂರೈಕೆ ನಿರೀಕ್ಷೆ:
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇರಾನ್‌ನಿಂದಲೂ ಕಚ್ಚಾ ತೈಲ ಪೂರೈಕೆಯಾಗುವ ನಿರೀಕ್ಷೆ ಇದೆ. ಪರಮಾಣು ಕಾರ್ಯಕ್ರಮ ಕುರಿತ ೨೦೧೫ರ ಜಂಟಿ ಸಮಗ್ರ ಕಾರ್ಯಸೂಚಿಯನ್ನು ಇರಾನ್ ಸಮ್ಮತಿಸಿದರೆ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧ ತೆರವಾಗಲಿದೆ. ಹಾಗೂ ಇರಾನ್ ತನ್ನ ತೈಲವನ್ನು ಭಾರತ ಮತ್ತು ಇತರ ಪ್ರಮುಖ ಬಳಕೆದಾರರಿಗೆ ಪೂರೈಸಲು ಹಾದಿ ಸುಗಮವಾಗಲಿದೆ. ಇದರ ಪರಿಣಾಮ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ೮೫-೯೦ ಡಾಲರ್‌ಗೆ ತಗ್ಗುವ ನಿರೀಕ್ಷೆ ಇದೆ. ಇದು ಹಣದುಬ್ಬರವನ್ನೂ ಅಲ್ಪಾವಧಿಗೆ ತಗ್ಗಿಸುವ ಸಾಧ್ಯತೆ ಇದೆ. ಭಾರತ ಕೂಡ ಇರಾನ್‌ನಿಂದ ತೈಲ ಖರೀದಿಗೆ ಕಾಯುತ್ತಿದೆ.
ಏನಿದು ಯುರೋಪ್ ಪ್ರಸ್ತಾಪ?: ೨೦೧೫ರಲ್ಲಿ ಚೀನಾ, ಫ್ರಾನ್ಸ್, ಜರ್ಮನಿ, ಬ್ರಿಟನ್, ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಇರಾನ್ ಜಂಟಿ ಸಮಗ್ರ ಒಪ್ಪಂದ ( Joint comprehensive plan of action) ಮಾಡಿಕೊಂಡಿದ್ದವು. ಇರಾನ್‌ನ ಶಾಂತಿಯುತ ಪರಮಾಣು ಕಾರ್ಯಕ್ರಮ ಇದರ ಉದ್ದೇಶವಾಗಿತ್ತು. ಆದರೆ ೨೦೧೮ರಲ್ಲಿ ಅಮೆರಿಕ ಈ ಒಪ್ಪಂದದಿಂದ ಹೊರ ಬಂದಿತ್ತು. ಹಾಗೂ ಬಳಿಕ ಇರಾನ್ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು. ಇದೀಗ ಯುರೋಪ್ ೨೦೧೫ರ ಒಪ್ಪಂದವನ್ನು ಮರು ಜಾರಿಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದನ್ನು ಇರಾನ್ ಸಮ್ಮತಿಸಿದರೆ, ಇರಾನ್ ತೈಲ ರಫ್ತಿನ ಮೇಲಿರುವ ನಿರ್ಬಂಧಗಳು ತೆರವಾಗಲಿದೆ.