ಮುಂಬಯಿ: ಮುಂಬಯಿನಲ್ಲಿ ಶಾಲಾ ಬಾಲಕಿಯೊಬ್ಬಳು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಲೋವರ್ಸ್ ಅನ್ನು ಹೆಚ್ಚಿಸಲು ಯತ್ನಿಸಿ, ಸೈಬರ್ ದಾಳಿಗೆ (Cyber crime) ಗುರಿಯಾಗಿ 50,000 ರೂ. ಕಳೆದುಕೊಂಡ ಘಟನೆ ನಡೆದಿದೆ. ಬಾಲಕಿಯ ತಂದೆಯ ಉಳಿತಾಯ ಖಾತೆಯಲ್ಲಿದ್ದ ಹಣಕ್ಕೆ ಸೈಬರ್ ವಂಚಕ ಕನ್ನ ಹಾಕಿದ್ದಾನೆ.
16 ವರ್ಷ ವಯಸ್ಸಿನ ಬಾಲಕಿ ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತಂದೆಯ ಸೆಲ್‌ಫೋನ್ ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದಿದ್ದಳು. ಚಾಟ್ ಮಾಡಲು ಮತ್ತು ವಿಡಿಯೊ ಕ್ಲಿಪ್ ನೀಡಲು ಬಳಸುತ್ತಿದ್ದಳು. ಇತ್ತೀಚೆಗೆ ಸೋನಾಲಿ ಸಿಂಗ್ ಹೆಸರಿನಲ್ಲಿ ಬಂದಿದ್ದ ರಿಕ್ವೆಸ್ಟ್ ಅನ್ನು ಬಾಲಕಿ ಸ್ವೀಕರಿಸಿದ್ದಳು. ಶಾಲೆಯ ಹಳೆ ವಿದ್ಯಾರ್ಥಿ ಎಂದು ಆತ ಗುರುತಿಸಿಕೊಂಡಿದ್ದ. ಜತೆಗೆ ಫಾಲೋವರ್ಸ್ ಸಂಖ್ಯೆಯನ್ನು 50,000 ಕ್ಕೆ ಏರಿಸಲು ಸಹಕರಿಸುವುದಾಗಿ ತಿಳಿಸಿದ್ದ. ಈತ ಮೊದಲು 2,000 ರೂ, ಬಳಿಕ 4,000 ರೂ, ಹೀಗೆ ಕಂತುಗಳಲ್ಲಿ ಒಟ್ಟು 55,000 ರೂ.ಗಳನ್ನು ಬಾಲಕಿಯ ತಂದೆಯ ಡಿಜಿಟಲ್ ವ್ಯಾಲೆಟ್‌ನಿಂದ ಪಡೆದಿದ್ದ. ಒಂದು ದಿನ ತಂದೆ ಡಿಜಿಟಲ್ ವ್ಯಾಲೆಟ್ ಖಾಲಿ ಆಗಿದ್ದನ್ನು ಗಮನಿಸಿದಾಗ ವಿಷಯ ಗೊತ್ತಾಗಿದೆ. ಸೈಬರ್ ವಂಚಕ ಸೋನಾಲಿ ಸಿಂಗ್ ಎಂಬ ನಕಲಿ ಹೆಸರಿನಲ್ಲಿ ಬಂದಿದ್ದ.