ಮುಂಬಯಿ: ಮುಂಬಯಿ ಸಮೀಪ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ತಲೆಗೆ ತೀವ್ರ ಗಾಯವಾಗಿತ್ತು ಎಂದು ವೈದ್ಯರು (Cyrus Mistry Death) ತಿಳಿಸಿದ್ದಾರೆ.
ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತದ ವೇಳೆ ಸೈರಸ್ ಅವರ ತಲೆಗೆ ಗಾಯವಾಗಿತ್ತು. ಹಾಗೂ ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುನ್ನವೇ ಸೈರಸ್ ನಿಧನರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಸೈರಸ್ ಜತೆಗಿದ್ದ ಅವರ ಸ್ನೇಹಿತ ಜಹಾಂಗೀರ್ ದಿನ್‌ಶಾ ಪಂಡೋಳೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅವರ ಎಡಗಾಲು ಮುರಿದಿತ್ತು. ಜತೆಗೆ ತಲೆಗೆ ಗಾಯವಾಗಿತ್ತು. ಉಳಿದ ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಯಾದ ವೇಗದ ಪರಿಣಾಮ ಕಾರು ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ವರದಿ ತಿಳಿಸಿದೆ.
ಕಾರನ್ನು ಅನಾಹಿತಾ ಪಂಡೋಳೆ (55) ಚಲಾಯಿಸುತ್ತಿದ್ದರು. ಅವರು ಮುಂಬಯಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಖ್ಯಾತ ಗೈನಕಾಲಜಿಸ್ಟ್ ಆಗಿದ್ದಾರೆ. ಅನಾಹಿತಾ ಹಾಗೂ ಮುಂದಿನ ಸೀಟಿನಲ್ಲಿದ್ದ ಅವರ ಪತಿ ಡೇರಿಯಸ್ ಪಂಡೋಳೆ (೬೦) ತೀವ್ರ ಗಾಯಗೊಂಡಿದ್ದಾರೆ. ಡೇರಿಯಸ್ ಪಾಂಡೋಳೆ ಅವರು ಟಾಟಾ ಗ್ರೂಪ್‌ನಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದರು.
ಇದನ್ನೂ ಓದಿ: Cyrus Mistry Death | ಸೈರಸ್ ಮಿಸ್ತ್ರಿ ಸೀಟ್ ಬೆಲ್ಟ್ ಧರಿಸಿರಲಿಲ್ಲ, ಕೇವಲ 9 ನಿಮಿಷದಲ್ಲಿ 20 ಕಿ.ಮೀ ತಲುಪಿದ್ದ ಕಾರು