ನವ ದೆಹಲಿ: ಭಾರತದ ಪ್ರಾದೇಶಿಕ ಭಾಷೆಗಳ ನಂ.೧ ಕಂಟೆಂಟ್ ಪ್ಲಾಟ್‌ಫಾರ್ಮ್ ಡೈಲಿಹಂಟ್ ಮತ್ತು ಪ್ರತಿಷ್ಠಿತ ಉದ್ದಿಮೆ ಸಮೂಹವಾದ ಅದಾನಿ ಗ್ರೂಪ್‌ನ ಬೆಂಬಲಿತ, ಎಎಂಜಿ ಮೀಡಿಯಾ ನೆಟ್ ವರ್ಕ್ಸ್ ವತಿಯಿಂದ ರಾಷ್ಟ್ರವ್ಯಾಪಿ ನಡೆದ ಸ್ಟೋರಿ ಫಾರ್ ಗ್ಲೋರಿ ಪ್ರತಿಭಾನ್ವೇಷಣೆ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ (Dailyhunt | #StoryForGlory ) ದಿಲ್ಲಿಯಲ್ಲಿ ನಡೆಯಿತು. ವಿಡಿಯೊ ಮತ್ತು ಮುದ್ರಣ ಮಾಧ್ಯಮದಲ್ಲಿ 12 ಪ್ರತಿಭಾವಂತ ವಿಜೇತರನ್ನು ಪುರಸ್ಕರಿಸಲಾಯಿತು.
ನಾಲ್ಕು ತಿಂಗಳ ಕಾಲ ನಡೆದ ಈ ಪ್ರತಿಭಾನ್ವೇಷಣೆಯು ಕಳೆದ ಮೇನಲ್ಲಿ ಶುರುವಾಗಿತ್ತು. 1,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಪೈಕಿ 20 ಪ್ರತಿಭಾವಂತರ ಅರ್ಜಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಇವರಿಗೆ ಎಂಟು ವಾರಗಳ ಫೆಲೋಶಿಪ್ ಮತ್ತು ಎರಡು ವಾರಗಳ ಕಲಿಕಾ ತರಬೇತಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ಎಂಐಸಿಎನಲ್ಲಿ (MICA) ನೀಡಲಾಯಿತು. ಪ್ರಮುಖ ಪ್ರಕಾಶನ ಸಂಸ್ಥೆಗಳ ಮೂಲಕ ಅಂತಿಮ ಪ್ರಾಜೆಕ್ಟ್‌ಗಳಿಗೆ ಸಲಹೆಗಳನ್ನು ಪಡೆಯಲಾಯಿತು. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಸ್ಟೋರಿ ಟೆಲ್ಲಿಂಗ್ ಬಗ್ಗೆ ಮತ್ತು ಕಂಟೆಂಟ್‌ಗಳನ್ನು ಅಭಿವೃದ್ಧಿಪಡಿಸುವ ಕೌಶಲಾಭಿವೃದ್ಧಿ ಬಗ್ಗೆ ವ್ಯಾಪಕ ತರಬೇತಿಯನ್ನು ನೀಡಲಾಯಿತು.
ಗ್ರ್ಯಾಂಡ್ ಫಿನಾಲೆಯಲ್ಲಿ 20 ಮಂದಿ ಸ್ಪರ್ಧಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದರು. ಅದರಲ್ಲಿ 12 ಮಂದಿಯನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು. ಜ್ಯೂರಿಗಳಲ್ಲಿ ಡೈಲಿ ಹಂಟ್‌ನ ಸ್ಥಾಪಕ ವೀರೇಂದ್ರ ಗುಪ್ತಾ, ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಸಿಇಒ ಮತ್ತು ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಕಾರ್ಯಕಾರಿ ನಿರ್ದೇಶಕ ಅನಂತ್ ಗೊಯೆಂಕಾ, ಫಿಲ್ಮ್ ಕಂಪಾನಿಯನ್‌ನ ಅನುಪಮಾ ಛೋಪ್ರಾ, ಶಿ ದ ಪೀಪಲ್‌ನ ಸ್ಥಾಪಕರಾದ ಶಾಲಿ ಛೋಪ್ರಾ, ಫ್ಯಾಕ್ಟರ್ ಡೈಲಿಯ ಸಹ ಸಂಸ್ಥಾಪಕರಾದ ಪಂಕಜ್ ಮಿಶ್ರಾ, ಗಯೋನ್ ಕನೆಕ್ಷನ್‌ನ ಸ್ಥಾಪಕ ನೀಲೇಶ್ ಮಿಶ್ರಾ ಭಾಗವಹಿಸಿದ್ದರು. ಪತ್ರಿಕೋದ್ಯಮದ ಕರಿಯರ್‌ನಲ್ಲಿ ಮತ್ತು ಸೃಜನಾತ್ಮಕ ಕಂಟೆಂಟ್ ರಚನೆಯ ಕ್ಷೇತ್ರದಲ್ಲಿ ಸಾಧಕರಾಗಲು ಬಯಸುವ ಪ್ರತಿಭಾನ್ವಿತರಿಗೆ #StoryForGlory ಉತ್ತಮ ವೇದಿಕೆಯನ್ನು ಕಲ್ಪಿಸಿತು.
” ತಂತ್ರಜ್ಞಾನದ ನೆರವಿನಿಂದ ಭಾರತದ ಪ್ರತಿಭಾವಂತರನ್ನು ಅನ್ವೇಷಿಸಲು ಹಾಗೂ ಅವರ ಪ್ರತಿಭೆಯನ್ನು ಹೊರ ತರಲು ಅವಕಾಶಗಳು ಸೃಷ್ಟಿಯಾಗುತ್ತಿವೆ. ಡಿಜಿಟಲ್ ನ್ಯೂಸ್ ಮತ್ತು ಮಾಧ್ಯಮ ಅತ್ಯಾಧುನಿಕವಾಗುತ್ತಿದೆ. ಮುಖ್ಯವಾಗಿ ಕಥನ ಕಲೆ ವಿಕಾಸವಾಗುತ್ತಿದೆ. ಭಾರತದ ಮಾಧ್ಯಮ ವಲಯವನ್ನು ಪ್ರಬುದ್ಧ ಮತ್ತು ಸಮೃದ್ಧಗೊಳಿಸುವ ಬದ್ಧತೆಯು ಭಾಗವಾಗಿ ಈ ಉಪಕ್ರಮವನ್ನು ಕೈಗೊಂಡಿದ್ದೇವೆʼʼ ಎಂದು ಡೈಲಿಹಂಟ್‌ನ ಸ್ಥಾಪಕ ವೀರೇಂದ್ರ ಗುಪ್ತಾ ತಿಳಿಸಿದರು.
” ಭಾರತ ವೈವಿಧ್ಯಮಯ ಕಥನಗಳ ಕಣಜಗಳ ತವರಾಗಿದೆ. ಡೈಲಿ ಹಂಟ್ ಜತೆಗೆ ಎಎಂಜಿ ಮೀಡಿಯಾ ನೆಟ್ ವರ್ಕ್ಸ್ ಮೂಲಕ ಮುಂದಿನ ಪೀಳಿಗೆಯ ಪ್ರತಿಭಾವಂತ ಕಥನಕಾರರು, ಪತ್ರಕರ್ತರು, ಕಂಟೆಂಟ್ ನಿರೂಪಕರನ್ನು ಗುರುತಿಸಿ ಬೆಂಬಲಿಸುತ್ತಿದ್ದೇವೆ. #StoryForGlory ಉಪಕ್ರಮಕ್ಕೆ ಅತ್ಯುತ್ತಮ ಸ್ಪಂದನೆ ಲಭಿಸಿದೆʼʼ ಎಂದು ಎಎಂಜಿ ಮೀಡಿಯಾ ನೆಟ್ ವರ್ಕ್ಸ್ ಲಿಮಿಟೆಡ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಸಂಜಯ್ ಪುಗಾಲಿಯಾ ತಿಳಿಸಿದರು.
ಪ್ರಸಕ್ತ ವಿದ್ಯಮಾನಗಳು, ವಾರ್ತೆಗಳು, ವಿಜ್ಞಾನ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿಯಲ್ಲಿ ಉತ್ತಮ ಕಂಟೆಂಟ್‌ಗಳನ್ನು ವಿಡಿಯೊ ಮತ್ತು ಮುದ್ರಣ ಮಾಧ್ಯಮದಲ್ಲಿ ಅಭಿವೃದ್ಧಿಪಡಿಸುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು #StoryForGlory ಉಪಕ್ರಮದ ಉದ್ದೇಶವಾಗಿತ್ತು.