ನವ ದೆಹಲಿ: ನಕಲಿ ಔಷಧಗಳನ್ನು ತಯಾರಿಸಿದ 18 ಔಷಧ ಕಂಪನಿಗಳ ಲೈಸೆನ್ಸ್ ಅನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರದ್ದುಪಡಿಸಿದೆ. ಔಷಧ ಮಾರಾಟ ವಲಯದ ನಿಯಂತ್ರಕವು 20 ರಾಜ್ಯಗಳಲ್ಲಿ 76 ಕಂಪನಿಗಳ ಉತ್ಪನ್ನಗಳ ಬಗ್ಗೆ ತಪಾಸಣೆ ನಡೆಸಿತ್ತು. ಬಳಿಕ ಈ ಕ್ರಮ ಕೈಗೊಂಡಿದೆ. ಲೈಸೆನ್ಸ್ ಕಳೆದುಕೊಂಡ ಕಂಪನಿಗಳ ಹೆಸರು ಬಹಿರಂಗವಾಗಿಲ್ಲ.
ನಕಲಿ ಔಷಧ ಉತ್ಪಾದನೆ, ಕಲಬೆರಕೆಯ ಪ್ರಕರಣಗಳನ್ನು ಈ ಕಂಪನಿಗಳ ವಿರುದ್ಧ ದಾಖಲಿಸಲಾಗಿದೆ. ಇದರ ಜತೆಗೆ 26 ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶದಲ್ಲಿ ಈ ಕಂಪನಿಗಳು ಇವೆ. ಕಳೆದ ಫೆಬ್ರವರಿಯಲ್ಲಿ ತಮಿಳುನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್, ತನ್ನ ಐ ಡ್ರಾಪ್ ಔಷಧವನ್ನು ಹಿಂತೆಗೆದುಕೊಂಡಿತ್ತು. ಇದನ್ನು ಅಮೆರಿಕದಲ್ಲಿ ಬಳಸಿದವರಿಗೆ ಕಣ್ಣಿನ ದೃಷ್ಟಿಯೇ ಹೋಗಿತ್ತು ಎಂದು ಆರೋಪಿಸಲಾಗಿದೆ.