ನವ ದೆಹಲಿ: ತೆರಿಗೆದಾರರಿಗೆ ೨೦೨೧-೨೨ರ ಸಾಲಿನ ಐಟಿ ರಿಟರ್ನ್ ಸಲ್ಲಿಕೆಯ ಗಡುವು ನಿಗದಿತ ಜುಲೈ ೩೧ಕ್ಕೆ ಮುಕ್ತಾಯವಾಗಿದೆ. ಇದರೊಂದಿಗೆ ಕೊನೆಯ ಕ್ಷಣದಲ್ಲಿ ಗಡುವು ವಿಸ್ತರಣೆ ಆದೀತು ಎಂಬ ಹಲವರ ನಿರೀಕ್ಷೆ ಈ ಸಲ ಈಡೇರಿಲ್ಲ.
ಒಟ್ಟು ೫.೫ ಕೋಟಿ ಐಟಿಆರ್‌ಗಳು ಜುಲೈ ೩೧ರ ರಾತ್ರಿ ೮ ಗಂಟೆಯ ತನಕ ಸಲ್ಲಿಕೆಯಾಗಿತ್ತು. ನಿನ್ನೆ ಒಂದೇ ದಿನ ೬೭ ಲಕ್ಷಕ್ಕೂ ಹೆಚ್ಚು ರಿಟರ್ನ್‌ಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆಯ ಟ್ವೀಟ್ ತಿಳಿಸಿದೆ.
ಕಳೆದ ಒಂದು ತಿಂಗಳಿಂದಲೂ ಆದಾಯ ತೆರಿಗೆ ಇಲಾಖೆಯು ೨೦೨೧-೨೨ರ ಐಟಿ ರಿಟರ್ನ್ ಅನ್ನು ಜುಲೈ ೩೧ರೊಳಗೆ ಸಲ್ಲಿಸಲು ಹಾಗೂ ದಂಡ ಮತ್ತು ಬಡ್ಡಿಯನ್ನು ತಪ್ಪಿಸಿಕೊಳ್ಳಲು ಮನವಿ ಮಾಡಿತ್ತು.
ಸಲ್ಲಿಸದೆ ಹೋದರೆ ಏನಾಗುತ್ತದೆ?
ಜುಲೈ ೩೧ರ ಗಡುವಿನೊಳಗೆ ಅದಾಯ ತೆರಿಗೆ ಐಟಿಆರ್ ಸಲ್ಲಿಸದೆ ಹೋದರೆ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ. ಈ ವರ್ಷದ ಡಿಸೆಂಬರ್ ೩೧ರವರೆಗೂ ಐಟಿಆರ್ ಸಲ್ಲಿಸಲು ಅವಕಾಶವಿದೆ. ಆದರೆ, ೫೦೦೦ ರೂ. ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮಾತ್ರ ಅನ್ವಯ. ಒಂದು ವೇಳೆ ಒಟ್ಟು ಆದಾಯ ಐದು ಲಕ್ಷಕ್ಕಿಂತ ಕಡಿಮೆ ಇದ್ದರೆ ಒಂದು ಸಾವಿರ ರೂ. ದಂಡ ಪಾವತಿಸಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಐಟಿಆರ್ ಸಲ್ಲಿಸಬಹುದು. ಆದಾಯ ತೆರಿಗೆ ಕಾಯಿದೆ ೧೯೬೧ರ ಪ್ರಕಾರ ವಿಳಂಬ ಶುಲ್ಕ (ಲೇಟ್ ಫೀ) ಪಾವತಿಸಿ ಐಟಿಆರ್ ಫೈಲಿಂಗ್ ಮಾಡುವುದಕ್ಕೆ ಅವಕಾಶವಿದೆ.
ಇದನ್ನೂ ಓದಿ: ವಿಸ್ತಾರ Money Guide| ಸಕಾಲಕ್ಕೆ ಐಟಿ ರಿಟರ್ನ್ ಸಲ್ಲಿಸದಿದ್ದರೆ 5,000 ರೂ. ತನಕ ದಂಡ