ನವ ದೆಹಲಿ: ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪರೇಖ್ (78) ಅವರು ಜೂನ್ 30ರಂದು ಬ್ಯಾಂಕ್‌ನ ಷೇರುದಾರರಿಗೆ ಬರೆದಿರುವ ಪತ್ರದಲ್ಲಿ ಸೇವೆಯಿಂದ ನಿವೃತ್ತಿಯಾಗುವ ಸಮಯ ಸಮೀಪಿಸಿದೆ ( Deepak Parekh) ಎಂದು ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಜತೆ ಎಫ್‌ಡಿಎಫ್‌ಸಿ ವಿಲೀನವಾಗುತ್ತಿರುವ ಸಂದರ್ಭದಲ್ಲಿ ದೀಪಕ್ ಪರೇಖ್ ಅವರು ನಿವೃತ್ತಿಯ ಸುಳಿವು ನೀಡಿದ್ದಾರೆ.
ಎಚ್‌ಡಿಎಫ್‌ಸಿ ಷೇರುದಾರರಿಗೆ ಇದು ಬಹುಶಃ ನನ್ನ ಕೊನೆಯ ಸಂದೇಶ ಇರಬಹುದು. ಬ್ಯಾಂಕ್ ಭವಿಷ್ಯದಲ್ಲಿ ಉಜ್ವಲ ಬೆಳವಣಿಗೆ ಸಾಧಿಸುವ ವಿಶ್ವಾಸ ಇದೆ ಎಂದು ಪರೇಖ್ ಹೇಳಿದ್ದಾರೆ. ನಿವೃತ್ತಿಯ ಬಳಿಕ ದೀಪಕ್ ಪರೇಖ್ ಅವರು ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ. ಎಚ್‌ಡಿಎಫ್‌ಸಿ ಸಿಇಒ ಕೇಕಿ ಮಿಸ್ತ್ರಿ ಬ್ಯಾಂಕಿನ ಮಂಡಳಿಯನ್ನು ಸೇರುವ ನಿರೀಕ್ಷೆ ಇದೆ. ಜುಲೈ 1ರಿಂದ ಎಚ್‌ಡಿಎಫ್‌ಸಿಯು ಎಚ್‌ಡಿಎಫ್‌ಸಿ ಬ್ಯಾಂಕ್ ಜತೆ ವಿಲೀನವಾಗುವ ಸಾಧ್ಯತೆ ಇದೆ. ಇದರೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಜಗತ್ತಿನ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಲಿದೆ. ಷೇರು ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಜಗತ್ತಿನ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಆಗಲಿದೆ.
ಇದನ್ನೂ ಓದಿ: HDFC-HDFC Bank : ಜುಲೈ 1ಕ್ಕೆ ಎಚ್‌ಡಿಎಫ್‌ಸಿ ವಿಲೀನಕ್ಕೆ ಮುಹೂರ್ತ, ದೀಪಕ್ ಪರೇಖ್
ಜಗತ್ತಿನ ಅತಿ ದೊಡ್ಡ ಬ್ಯಾಂಕ್‌ಗಳ ಪಟ್ಟಿ ಇಂತಿದೆ. ( ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ)
ಜೆಪಿ ಮೋರ್ಗಾನ್ ಚೇಸ್ | 416.5 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ |
ಐಸಿಬಿಸಿ | 228.3 |
ಬ್ಯಾಂಕ್ ಆಫ್ ಅಮೆರಿಕ | 227.7 |
ಎಚ್‌ಡಿಎಫ್‌ಸಿ (ವಿಲೀನದ ಬಳಿಕ) | 171.8 |
ಅಗ್ರಿಕಲ್ಷರಲ್ ಬ್ಯಾಂಕ್ ಆಫ್ ಚೀನಾ | 168.9 |
ಚೀನಾ ಕನ್‌ಸ್ಟ್ರಕ್ಷನ್ ಬ್ಯಾಂಕ್ | 162.8 |
ಎಚ್‌ಎಸ್‌ಬಿಸಿ | 156.6 |
ವೆಲ್ಸ್ ಕಾರ್ಗೊ | 156.2 |
ಬ್ಯಾಂಕ್ ಆಫ್ ಚೀನಾ | 147.3 |
ಮೋರ್ಗಾನ್ ಸ್ಟಾನ್ಲಿ | 144.2 |
ದೀಪಕ್ ಪರೇಖ್ ಅವರು 1978ರಲ್ಲಿ ಎರಡು ಪಟ್ಟು ಹೆಚ್ಚು ಸಂಬಳದ, ಚೇಸ್ ಮ್ಯಾನ್‌ಹಟ್ಟನ್ ಬ್ಯಾಂಕ್‌ನ ಹುದ್ದೆಯನ್ನು ಬಿಟ್ಟು ಎಚ್‌ಡಿಎಫ್‌ಸಿಗೆ ಸೇರಿದ್ದರು. ಆಗ ಅವರಿಗೆ 33 ವರ್ಷ ವಯಸ್ಸು. ಇದೀಗ ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಅನ್ನು ಕಟ್ಟಿ ನಿವೃತ್ತಿಯಾಗುತ್ತಿದ್ದಾರೆ.
ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಟ್ರಾನ್ಸಕ್ಷನ್ ಇದಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ವರ್ಷ ಏಪ್ರಿಲ್ 4ರಂದು 40 ಶತಕೋಟಿ ಡಾಲರ್ (3.28 ಲಕ್ಷ ಕೋಟಿ ರೂ.) ಮೌಲ್ಯದ ಡೀಲ್‌ನಲ್ಲಿ ಎಚ್‌ಡಿಎಫ್‌ಸಿಯನ್ನು ವಿಲೀನಗೊಳಿಸಲು ಸಮ್ಮತಿಸಿತ್ತು. ಇದರಿಂದಾಗಿ 168 ಶತಕೋಟಿ ಡಾಲರ್ (13.7 ಲಕ್ಷ ಕೋಟಿ ರೂ.) ಮೌಲ್ಯದ ಬ್ಯಾಂಕ್ ಸೃಷ್ಟಿಯಾಗಲಿದೆ. ಇದರಿಂದ ಉಭಯ ಬ್ಯಾಂಕ್‌ಗಳ ಕೋಟ್ಯಂತರ ಗ್ರಾಹಕರಿಗೆ ಹಾಗೂ ಅನುಕೂಲವಾಗಲಿದೆ ಎಂದು ದೀಪಕ್ ಪರೇಖ್ ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿಯ 25 ಷೇರುಗಳಿಗೆ 42 ಹೊಸ ಷೇರುಗಳನ್ನು ಮಂಜೂರು ಮಾಡಲಿದೆ.