Site icon Vistara News

NSE phone tapping case : ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ದಿಲ್ಲಿ ಹೈಕೋರ್ಟ್‌ ಜಾಮೀನು

chitra ramakrishnan

ನವ ದೆಹಲಿ: ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಉದ್ಯೋಗಿಗಳ ಟೆಲಿಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ದಿಲ್ಲಿ ಹೈಕೋರ್ಟ್‌ ಗುರುವಾರ ಜಾಮೀನು ನೀಡಿದೆ. ( NSE phone tapping case) ಅಕ್ರಮ ಹಣ ವರ್ಗಾವಣೆಯ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ. ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರು ಚಿತ್ರಾಗೆ ಜಾಮೀನು ನೀಡಿ ಆದೇಶಿಸಿದ್ದಾರೆ.

ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ೨೦೦೯ ಮತ್ತು ೨೦೧೭ರ ನಡುವೆ ನಡೆದ ಅಕ್ರಮ ಫೋನ್‌ ಟ್ಯಾಪಿಂಗ್‌ ಹಾಗೂ ಎನ್‌ಎಸ್‌ಇ ಉದ್ಯೋಗಿಗಳದೇ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ಲೇವಾದೇವಿ ಪ್ರಕರಣದಲ್ಲಿ ಕಳೆದ ವರ್ಷ ಬಂಧಿಸಲಾಗಿತ್ತು. ಹೈಕೋರ್ಟ್ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿದ್ದರೂ, ಜಾರಿ ನಿರ್ದೇಶನಾಲಯ ವಿರೋಧಿಸಿತ್ತು.

ಚಿತ್ರಾ ರಾಮಕೃಷ್ಣ ಮತ್ತು ಸಹೋದ್ಯೋಗಿ ರವಿ ನಾರಾಯಣ್‌ ಅವರು ಮುಂಬಯಿಯ ಮಾಜಿ ಪೊಲೀಸ್‌ ಕಮೀಷನರ್‌ ಸಂಜಯ್‌ ಪಾಂಡೆ ಅವರ ನೆರವು ಪಡೆದು ಉದ್ಯೋಗಿಗಳ ಫೋನ್‌ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಸ್ವತಃ ಕೇಂದ್ರ ಗೃಹ ಸಚಿವಾಲಯವೇ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದೀಗ ಜಾರಿ ನಿರ್ದೇಶನಾಲಯ ಈ ವಿಚಾರದಲ್ಲಿ ನಡೆದ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿದೆ.

ಏನಿದು ವಂಚನೆ?
೨೦೧೫ರಲ್ಲಿ ಅಕ್ರಮಗಳ ಬಗ್ಗೆ ಗಮನ ಸೆಳೆಯುವ ವಿಷಲ್‌ ಬ್ಲೋವರ್‌ ಒಬ್ಬರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಕೆಲವೊಂದು ಬ್ರೋಕರ್‌ಗಳಿಗೆ ಮಾರುಕಟ್ಟೆ ತೆರೆಯುವ ಮೊದಲೇ ಎನ್‌ಎಸ್‌ಇ ಲಿಂಕ್‌ ಸಿಕ್ಕಿ ಬಿಡುತ್ತಿದೆ. ಅವರು ಬೇಗನೆ ವ್ಯವಹಾರ ಆರಂಭಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಎನ್‌ಎಸ್‌ಇ ಅಲ್ಲದ ಇನ್ನೊಂದು ಸಹ ಲೊಕೇಶನ್‌ನಿಂದ ಈ ಲಿಂಕ್‌ ಸಿಗುತ್ತಿದೆ ಎಂದು ಆರೋಪಿಸಿದ್ದರು. ಚಿತ್ರಾ ರಾಮಕೃಷ್ಣ ಅವರು ೨೦೧೩ರಲ್ಲಿ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ನಂತರದ ಬೆಳವಣಿಗೆ ಎಂದು ಆರೋಪಿಸಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಚಿತ್ರಾ ರಾಮಕೃಷ್ಣ ಮತ್ತು ಟೀಮ್‌ ನಡೆಸಿದ ಅಕ್ರಮಗಳು ಬಯಲಿಗೆ ಬಂದಿದ್ದವು.

Exit mobile version