ಮುಂಬಯಿ: ಭಾರತದ ಅತ್ಯಂತ ಶ್ರೀಮಂತ ಸಿಇಒ ಎಂದೇ ಖ್ಯಾತರಾಗಿರುವ ಡಿಮಾರ್ಟ್ ಸಿಇಒ ನವಿಲ್ ನೊರೋನ್ಹಾ, ಮುಂಬಯಿನಲ್ಲಿ 70 ಕೋಟಿ ರೂ. ಬೆಲೆ ಬಾಳುವ ಎರಡು ಅಪಾರ್ಟ್‌ಮೆಂಟ್‌ಗಳನ್ನು (DMart CEO) ಖರೀದಿಸಿದ್ದಾರೆ.
ರಿಯಲ್ ಎಸ್ಟೇಟ್ ಕಂಪನಿ ರುಸ್ತೋಮ್‌ಜೀ ಗ್ರೂಪ್ ನಿರ್ಮಿಸುತ್ತಿರುವ ಪ್ರಾಜೆಕ್ಟ್‌ನಲ್ಲಿ ನವಿಲ್ ನೊರೋನ್ಹಾ ಎರಡು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸುತ್ತಿದ್ದಾರೆ. ಇವುಗಳ ಕಾರ್ಪೆಟ್ ಏರಿಯಾ 8640 ಚದರ ಅಡಿಗಳಾಗಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ಗೆ ಸಮೀಪದಲ್ಲಿ ಈ ಪ್ರಾಜೆಕ್ಟ್ ಬರುತ್ತಿದೆ.
ಮುಂಬಯಿನ ಇತ್ತೀಚಿನ ದೊಡ್ಡ ರಿಯಾಲ್ಟಿ ವರ್ಗಾವಣೆಗಳಲ್ಲಿ ಇದೂ ಒಂದಾಗಿದೆ. ನವಿಲ್ ನೊರೋನ್ಹಾ 3.30 ಕೋಟಿ ರೂ. ಮುದ್ರಾಂಕ ಶುಲ್ಕವನ್ನೂ ನೀಡಿದ್ದಾರೆ. ಡಿಮಾರ್ಟ್ ಸ್ಟೋರ್‌ಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್‌ನ ಷೇರು ದರಗಳು ಏರಿಕೆಯಾದ ಬೆನ್ನಲ್ಲೇ ನವಿಲ್ ನೊರೋನ್ಹಾ ಅವರು ಭಾರತದ ಶ್ರೀಮಂತ ಸಿಇಒ ಆಗಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್‌ನಲ್ಲಿ 2% ಷೇರುಗಳನ್ನು ಅವರು ಹೊಂದಿದ್ದಾರೆ.
ಯಾರಿವರು ನವಿಲ್ ನೊರೋನ್ಹಾ?!
ಭಾರತದ ಶ್ರೀಮಂತ ಸಿಇಒ ಎನ್ನಿಸಿರುವ ನವಿಲ್ ನೊರೋನ್ಹಾ (47) ಅವರು ಡಿಮಾರ್ಟ್ ಅನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕಂಪನಿಯ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು 2002ರಲ್ಲಿ ನವಿಲ್ ಅವರನ್ನು ಸಿಇಒ ಆಗಿ ನೇಮಿಸಿದ್ದರು. ಮುಂಬಯಿ ಮೂಲದ ನವಿಲ್ ನಿರೋನ್ಹಾ, ಮ್ಯಾನೇಜ್‌ಮೆಂಟ್ ಪದವಿ ಗಳಿಸಿದ್ದಾರೆ. ಈ ಹಿಂದೆ ಹಿಂದುಸ್ತಾನ್ ಯುನಿಲಿವರ್‌ನಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಅವೆನ್ಯೂ ಸೂಪರ್‌ಮಾರ್ಟ್ ಸಿಇಒ ಆದರು.
ನವಿಲ್ ನೊರೋನ್ಹಾ ಸಂಪತ್ತು 7,744 ಕೋಟಿ ರೂ.
ಅವೆನ್ಯೂ ಸೂಪರ್‌ಮಾರ್ಟ್ ಷೇರು ದರ 5,899 ರೂ.ಗೆ ಏರಿದ ಬೆನ್ನಲ್ಲೇ, ನವಿಲ್ ಅವರ ನಿವ್ವಳ ಸಂಪತ್ತು 7,744 ಕೋಟಿ ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ ಭಾರತದ ಶ್ರೀಮಂತ ಸಿಇಒ ಎನ್ನಿಸಿದ್ದಾರೆ. ಅವೆನ್ಯೂವಿನಲ್ಲಿ ಅವರು 1,30,74,043 ಷೇರುಗಳನ್ನು ಹೊಂದಿದ್ದಾರೆ.
ಕೊಂಕಣಿಯಲ್ಲಿ ಮಾತನಾಡಬಲ್ಲ ನೊರೋನ್ಹಾಗೆ ಕರ್ನಾಟಕದ ನಂಟು!
ದಮಾನಿ ಅವರಂತೆಯೇ ನವಿಲ್ ನೊರೋನ್ಹಾ ಪ್ರಚಾರಗಳಿಂದ ಗಾವುದ ದೂರ ಸರಿಯುವ ವ್ಯಕ್ತಿ. ಕೊಂಕಣಿಯಲ್ಲಿ ಮಾತನಾಡಬಲ್ಲ ನವಿಲ್ ಅವರು ಕರಾವಳಿ ಕರ್ನಾಟಕದ ನಂಟನ್ನು ಹೊಂದಿದ್ದಾರೆ.