Site icon Vistara News

DMart plan | ಡಿಮಾರ್ಟ್‌ ಸ್ಟೋರ್‌ಗಳ ಸಂಖ್ಯೆ 1,500ಕ್ಕೆ ಏರಿಸಲು ಭರದ ಸಿದ್ಧತೆ

D-Mart

ನವ ದೆಹಲಿ: ಭಾರತದಲ್ಲಿ ಡಿಮಾರ್ಟ್‌ ಸೂಪರ್‌ ಮಾರ್ಕೆಟ್‌ ಸರಣಿಯ ಸ್ಟೋರ್‌ಗಳ (DMart plan) ಸಂಖ್ಯೆ ಐದು ಪಟ್ಟು ವೃದ್ಧಿಸಲಿದೆ.

ಡಿಮಾರ್ಟ್‌ ಸ್ಟೋರ್‌ಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌, ಭಾರತದ ನಾಲ್ಕನೇ ಅತಿ ದೊಡ್ಡ ದಿನಸಿ ಮಳಿಗೆಗಳ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಡಿಮಾರ್ಟ್‌ ಸೂಪರ್‌ ಮಾರ್ಕೆಟ್‌ಗಳ ಸಂಖ್ಯೆಯನ್ನು ೨8೪ರಿಂದ ೧,೫೦೦ಕ್ಕೆ ಏರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಿಇಒ ನೆವಿಲ್ಲೆ ನೊರೊನ್ಹಾ ತಿಳಿಸಿದ್ದಾರೆ. ಆದರೆ ಇದಕ್ಕೆ ಹೂಡಿಕೆ ಎಷ್ಟು ಮಾಡಲಾಗುತ್ತಿದೆ ಎಂಬ ವಿವರವನ್ನು ಅವರು ನೀಡಿಲ್ಲ.

ಮುಂದಿನ ೨೦ ವರ್ಷಗಳ ಕಾಲ ಯಾವುದೇ ಚಿಂತೆ ಇಲ್ಲದೆ ಅನೂಹ್ಯವಾಗಿ ಬೆಳೆಯಲು ಮಾರುಕಟ್ಟೆಯಲ್ಲಿ ಅವಕಾಶ ಇದೆ ಎಂದು ಅವರು ಹೇಳಿದರು. ಮಧ್ಯಮ ವರ್ಗದ ಜನತೆಯ ನೆಚ್ಚಿನ ಶಾಪಿಂಗ್‌ ತಾಣವಾಗಿ ಹೊರಹೊಮ್ಮಿದೆ. ಡಿಮಾರ್ಟ್‌ ಇ-ಕಾಮರ್ಸ್‌ ಮೂಲಕವೂ ತನ್ನ ವಹಿವಾಟು ವಿಸ್ತರಣೆಗೆ ಯತ್ನಿಸುತ್ತಿದೆ.

ಉದ್ಯಮಿ ರಾಧಾಕಿಶನ್‌ ದಮಾನಿ ಅವರು ೨೦೦೨ರಲ್ಲಿ ಮೊದಲ ಡಿಮಾರ್ಟ್‌ ಸ್ಟೋರ್‌ ತೆರೆದಿದ್ದರು. ಈಗ ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು, ಪಂಜಾಬ್‌, ಛತ್ತೀಸ್‌ ಗಢ, ಎನ್‌ಸಿಆರ್‌, ರಾಜಸ್ಥಾನದಲ್ಲಿ ಡಿಮಾರ್ಟ್‌ ಸ್ಟೋರ್‌ಗಳಿವೆ.

2002ರಲ್ಲಿ ಡಿಮಾರ್ಟ್‌ ಅನ್ನು ಆರಂಭಿಸಿದಾಗ ದಮಾನಿ ಅವರಿಗೆ ೪೫ ವರ್ಷ ವಯಸ್ಸು. ಅವರು ಜನತೆ ದಿನ ನಿತ್ಯ ಬಳಸುವ ಆಹಾರ ವಸ್ತುಗಳು, ದಿನಸಿ ಮತ್ತು ಇತರ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಆದ್ಯತೆ ನೀಡಿದರು. ಈ ತಂತ್ರಗಾರಿಕೆ ಅವರಿಗೆ ಯಶಸ್ಸು ತಂದುಕೊಟ್ಟಿತ್ತು. ಈಗ ಡಿಮಾರ್ಟ್‌ನ ಮಾರುಕಟ್ಟೆ ಮೌಲ್ಯ ೨.೮೯ ಲಕ್ಷ ಕೋಟಿ ರೂ.ಗಳಾಗಿದೆ.

Exit mobile version