ನವ ದೆಹಲಿ: ದೇಶದಲ್ಲಿ ಕಪ್ಪುಹಣದ ಹಾವಳಿಯನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ 2016ರಲ್ಲಿ ನೋಟು ಅಮಾನ್ಯತೆಯ ನಿರ್ಧಾರವನ್ನು ಕೈಗೊಳ್ಳಲಾಯಿತು (Demonetisation) ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.
2016ರ ನವೆಂಬರ್‌ನಲ್ಲಿ ಕೈಗೊಂಡ 500 ರೂ. ಮತ್ತು 1000 ರೂ. ನೋಟುಗಳ ಅಮಾನ್ಯತೆಯ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿದೆ. ಸಮಗ್ರವಾಗಿ ಪರಾಮರ್ಶೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಕಪ್ಪುಹಣ ನಿರ್ಮೂಲನೆಗ ಭಾಗವಾಗಿ ಈ ತೀರ್ಮಾನಕ್ಕೆ ಬರಬೇಕಾಯಿತು ಎಂದು ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಿಫಾರಸ್ಸಿನ ಮೇರೆಗೆ ನೋಟು ಅಮಾನ್ಯತೆಯ ಕ್ರಮವನ್ನು ಜಾರಿಗೊಳಿಸಲಾಯಿತು. ಇದಕ್ಕೂ ಮುನ್ನ ಸೂಕ್ತ ಸಿದ್ಧತೆಯನ್ನೂ ಕೈಗೊಳ್ಳಲಾಗಿತ್ತು. ಕಪ್ಪುಹಣ, ನಕಲಿ ನೋಟುಗಳ ಹಾವಳಿಯನ್ನು ನಿರ್ಮೂಲನೆಗೊಳಿಸಲು ಹಾಗೂ ಡಿಜಿಟಲ್ ಪೇಮೆಂಟ್ ಪದ್ಧತಿಯನ್ನು ಉತ್ತೇಜಿಸಲು ನೋಟು ಅಮಾನ್ಯತೆಯ ಅಗತ್ಯ ಸೃಷ್ಟಿಯಾಗಿತ್ತು. ಇದೊಂದು ಆರ್ಥಿಕ ನೀತಿಯ ನಿರ್ಧಾರವಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿದೆ.
ನೋಟು ಅಮಾನ್ಯತೆ ಪ್ರಕ್ರಿಯೆ ಬಗ್ಗೆ ವಿವರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಅಕ್ಟೋಬರ್ 12ರಂದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು. ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನು ಒಳಗೊಂಡಿದ್ದ ಪೀಠ ಈ ಸೂಚನೆ ನೀಡಿತ್ತು.
ನೋಟು ಅಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 60 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.