Site icon Vistara News

ಸ್ಪೈಸ್‌ಜೆಟ್‌ ವಿಮಾನ ಹಾರಾಟವನ್ನು 50% ಕಡಿತಗೊಳಿಸಿ ಡಿಜಿಸಿಎ ಆದೇಶ

spicejet

ನವ ದೆಹಲಿ: ಇತ್ತೀಚಿಗೆ ಪದೇಪದೆ ತಾಂತ್ರಿಕ ಅಡಚಣೆಗೆ ಒಳಗಾಗಿ ಆತಂಕ ಸೃಷ್ಟಿಸಿದ್ದ ಸ್ಪೈಸ್‌ಜೆಟ್‌ ವಿರುದ್ಧ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಮುಂದಿನ ೮ ವಾರಗಳ ಕಾಲ ೫೦% ವಿಮಾನ ಹಾರಾಟವನ್ನು ಮಾತ್ರ ನಡೆಸುವಂತೆ ನಿರ್ಬಂಧಿಸಿದೆ. ಇತ್ತೀಚಿನ ವರ್ಷಗಳಲ್ಲಿಯೇ ಏರ್‌ಲೈನ್‌ ಒಂದರ ವಿರುದ್ಧ ಡಿಜಿಸಿಎ ಕೈಗೊಂಡಿರುವ ಕಠಿಣ ಕ್ರಮ ಇದಾಗಿದೆ.

ಸ್ಪೈಸ್‌ ಜೆಟ್‌ ಏರ್‌ಲೈನ್‌ನಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪದೋಷಗಳು, ‌ಶೋಕಾಸ್‌ ನೋಟಿಸ್‌ಗೆ ಏರ್‌ಲೈನ್ ಕೊಟ್ಟಿರುವ ಉತ್ತರಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಪೈಸ್‌ಜೆಟ್‌ ವಿಮಾನಗಳ ನಿರ್ಗಮನವನ್ನು ೫೦%ಕ್ಕೆ ನಿರ್ಬಂಧಿಸಲಾಗಿದೆ ಎಂದು ಡಿಜಿಸಿಎ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಇತ್ತೀಚೆಗೆ ಕೇವಲ ೧೮ ದಿನಗಳಲ್ಲಿ ೮ ಸಲ ಸ್ಪೈಸ್‌ಜೆಟ್‌ ವಿಮಾನಗಳಲ್ಲಿ ತಾಂತ್ರಿಕ ಅಡಚಣೆಗಳು ಕಂಡುಬಂದಿತ್ತು. ಇದನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿತ್ತು.

ಸ್ಪೈಸ್‌ಜೆಟ್‌ ತನ್ನ ತಾಂತ್ರಿಕ ನೈಪುಣ್ಯವನ್ನು ಸುಧಾರಿಸಿದರೆ, ಸುರಕ್ಷತೆಯ ಮಟ್ಟವನ್ನು ಡಿಜಿಸಿಎಯ ನಿರ್ದೇಶನಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದರೆ ವಿಮಾನ ಹಾರಾಟದ ಸಂಖ್ಯೆ ವೃದ್ಧಿಸಲಿದೆ.

ಸ್ಪೈಸ್‌ಜೆಟ್‌ ೨೦೨೨ರ ಏಪ್ರಿಲ್‌ ಮತ್ತು ಜುಲೈ ೫ರ ನಡುವೆ ಹಲವು ಸಲ ತಾಂತ್ರಿಕ ಅಡಚಣೆಗೆ ಒಳಗಾಗಿದೆ. ವಿಮಾನಗಳನ್ನು ಹಾರಾಟದ ನಡುವೆ ವಾಪಸ್‌ ಕರೆ ತರಲಾಗಿದೆ. ಏರ್‌ಲೈನ್‌ನ ಕಳಪೆ ನಿರ್ವಹಣೆಯ ಪರಿಣಾಮ ಸುರಕ್ಷತೆಗೆ ಧಕ್ಕೆಯಾಗಿರುವುದು ಕಂಡು ಬಂದಿದೆ. ೨೦೨೧ರ ಸೆಪ್ಟೆಂಬರ್‌ನಲ್ಲಿ ಡಿಜಿಸಿಎ ನಡೆಸಿದ ಏರ್‌ಲೈನ್‌ನ ಲೆಕ್ಕಪರಿಶೋಧನೆಯ ಪ್ರಕಾರ, ಏರ್‌ಲೈನ್‌ನ ವೆಂಡರ್ಸ್‌ಗಳಿಗೆ ಬಿಡಿಭಾಗಗಳಿಗೆ ಸಂಬಂಧಿಸಿ ಹಣ ಪಾವತಿ ಆಗದಿರುವುದು ಗೊತ್ತಾಗಿದೆ. ಇದು ಸುರಕ್ಷತೆಯ ದೃಷ್ಟಿಯಿಂದ ಕಳಪೆ ನಿರ್ವಹಣೆಯಾಗಿದೆ ಎಂದು ಡಿಜಿಸಿಎ ತಿಳಿಸಿದೆ.

Exit mobile version