ಮುಂಬಯಿ: ಜಾರಿ ನಿರ್ದೇಶನಾಲಯವು (ED), ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL)- ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಬಿಲ್ಡರ್‌ಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸ್ಲೆ ಅವರಿಗೆ ಸೇರಿದ ೪೦೦ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರೊಂದಿಗೆ ಈ ಹಗರಣಕ್ಕೆ ಸಂಬಂಧಿಸಿ ಒಟ್ಟು ೧,೮೨೭ ಕೋಟಿ ರೂ. ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಂತಾಗಿದೆ.
ರೇಡಿಯಸ್ ಗ್ರೂಪ್‌ನ ಡೆವಲಪರ್ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸ್ಲೆ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ABIL) ಪ್ರವರ್ತಕರಾದ ಅವಿನಾಶ್ ಭೋಸ್ಲೆ ಎಂಬುವರ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇವರನ್ನು ಅನುಕ್ರಮವಾಗಿ ಜೂನ್ ೭ ಮತ್ತು ಜೂನ್ ೨೮ರಂದು ಬಂಧಿಸಲಾಗಿತ್ತು. ಇಬ್ಬರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಸಂಜಯ್ ಛಾಬ್ರಿಯವರ ೨೫೧ ಕೋಟಿ ರೂ. ಹಾಗೂ ಭೋಸ್ಲೆಯವರ ೧೬೪ ಕೋಟಿ ರೂ. ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಿದೆ.
ಬೆಂಗಳೂರಿನಲ್ಲಿಯೂ ನೂರಾರು ಕೋಟಿ ರೂ. ಆಸ್ತಿ ಜಪ್ತಿ: ಸಂಜಯ್ ಛಾಬ್ರಿಯಾ ಮುಂಬಯಿನ ಸಾಂತಾಕ್ರೂಜ್‌ನಲ್ಲಿ ಹೊಂದಿದ್ದ ೧೧೬.೫ ಕೋಟಿ ರೂ. ಆಸ್ತಿ, ಅವರು ತಮ್ಮ ಕಂಪನಿಯಲ್ಲಿ ಹೊಂದಿದ್ದ ೨೫% ಷೇರು, ಬೆಂಗಳೂರಿನಲ್ಲಿ ಹೊಂದಿದ್ದ ೧೧೬.೫ ಕೋಟಿ ರೂ. ಬೆಲೆಬಾಳುವ ಭೂಮಿ, ದಿಲ್ಲಿ ಏರ್‌ಪೋರ್ಟ್‌ನ ಸಮೀಪದಲ್ಲಿರುವ ತಮ್ಮ ಹೋಟೆಲ್ ಬಿಸಿನೆಸ್‌ನಲ್ಲಿ ಗಳಿಸಿದ್ದ ೧೩.೬೭ ಕೋಟಿ ರೂ. ಲಾಭವನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಎಬಿಐಎಲ್ ಗ್ರೂಪ್‌ನ ಸಂಸ್ಥಾಪಕ ಅವಿನಾಶ್ ಭೋಸ್ಲೆ ಮುಂಬಯಿನಲ್ಲಿ ಹೊಂದಿದ್ದ ೧೦೨.೮ ಕೋಟಿ ರೂ. ಮೌಲ್ಯದ ಫ್ಲ್ಯಾಟ್, ನಾಗ್ಪುರದಲ್ಲಿ ಹೊಂದಿದ್ದ ೧೭ ಕೋಟಿ ರೂ. ಮೌಲ್ಯದ ಎರಡು ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಯೆಸ್ ಬ್ಯಾಂಕ್‌ನ ಮಾಜಿ ಸಿಇಒ ರಾಣಾ ಕಪೂರ್, ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ವಿರುದ್ಧ ಇ.ಡಿ ತನಿಖೆ ನಡೆಯುತ್ತಿದೆ.
34,000 ಕೋಟಿ ರೂ.ಗಳ ಬ್ಯಾಂಕ್ ಹಗರಣ: ಡಿಎಚ್‌ಎಫ್‌ಎಲ್ ಎದುರಿಸುತ್ತಿರುವ ಬ್ಯಾಂಕ್ ಸಾಲದ ಹಗರಣವನ್ನು ಭಾರತದ ಇದುವರೆಗಿನ ಅತಿ ದೊಡ್ಡ ಬ್ಯಾಂಕಿಂಗ್ ಹಗರಣ ಎಂದು ಗುರುತಿಸಲಾಗಿದೆ. ಗೃಹ ಸಾಲ ಒದಗಿಸುವ ಡಿಎಚ್‌ಎಫ್‌ಎಲ್‌ನಿಂದ ಒಟ್ಟು ೧೭ ಬ್ಯಾಂಕ್‌ಗಳಿಗೆ ೩೪,೦೦೦ ಕೋಟಿ ರೂ. ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ. ಸಿನಿಐ, ಇ.ಡಿ ಈ ಹಗರಣದ ತನಿಖೆ ನಡೆಸುತ್ತಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಸಿಬಿಐ ಕೇಸ್ ದಾಖಲಿಸಿತ್ತು.
ಏನಿದು ಹಗರಣ?: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಪ್ರಕಾರ ಡಿಎಚ್‌ಎಫ್‌ಎಲ್ ೨೦೧೦-೨೦೧೮ರ ನಡುವೆ ೧೭ ಬ್ಯಾಂಕ್‌ಗಳ ಒಕ್ಕೂಟದಿಂದ ೪೨,೮೭೧ ಕೋಟಿ ರೂ. ಸಾಲ ಪಡೆದಿತ್ತು. ೨೦೧೯ರಿಂದೀಚೆಗೆ ಕಂಪನಿಯು ಸಾಲ ಮರು ಪಾವತಿಸಿಲ್ಲ. ಡಿಎಚ್‌ಎಫ್‌ಎಲ್‌ನ ಪ್ರವರ್ತಕರು ಮತ್ತು ಇತರರು ಈ ಸಾಲವನ್ನು ದುರ್ಬಳಕೆ ಮಾಡಿದ್ದಾರೆ. ಹಾಗೂ ಇದೇ ಕಾರಣದಿಂದ ಮರು ಪಾವತಿಸದೆ ವಂಚಿಸಲಾಗಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ, ಯೆಸ್ ಬ್ಯಾಂಕ್‌ನ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ಅವರು ಅನುಮಾನಾಸ್ಪದ ಹಣಕಾಸು ವರ್ಗಾವಣೆಗಳನ್ನು ನಡೆಸಿದ್ದು, ೫,೦೫೦ ಕೋಟಿ ರೂ. ವಂಚಿಸಿದ್ದಾರೆ.