ಬೆಂಗಳೂರು: ಬೆಂಗಳೂರು, ದಿಲ್ಲಿ ಮತ್ತು ವಾರಾಣಸಿ ಏರ್‌ಪೋರ್ಟ್‌ನಲ್ಲಿ ಇಂದಿನಿಂದ ಪೇಪರ್‌ಲೆಸ್ ಎಂಟ್ರಿ ಸಾಧ್ಯವಾಗಲಿದೆ. ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ಏರ್‌ಪೋರ್ಟ್ ನಿಮ್ಮ ಮುಖವನ್ನೇ ಗುರುತಿಸಲಿದೆ. ಈ ಸೌಕರ್ಯವನ್ನು ಡಿಜಿ ಯಾತ್ರಾ (Digi Yatra ) ಎಂದು ಕರೆದಿದೆ. ದೇಶದ ಈ ಮೂರು ಏರ್‌ಪೋರ್ಟ್‌ನಲ್ಲಿ ಮೊದಲ ಹಂತದಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗುತ್ತಿದೆ.
ಪ್ರಸ್ತುತ ದೇಶೀಯ ವಿಮಾನಯಾನಕ್ಕೆ ಈ ಸೌಲಭ್ಯ ಸಿಗುತ್ತಿದೆ. ಮೊದಲ ಹಂತದಲ್ಲಿ ಒಟ್ಟು 7 ಏರ್‌ಪೋರ್ಟ್‌ಗಳಲ್ಲಿ ಸಿಗಲಿದೆ. ಈಗ ಮೂರು ಏರ್‌ಪೋರ್ಟ್‌ಗಳಲ್ಲಿ (ಬೆಂಗಳೂರು, ದಿಲ್ಲಿ, ವಾರಾಣಸಿ) ಸೇವೆ ಲಭ್ಯ. ಹೈದರಾಬಾದ್, ಕೋಲ್ಕತಾ, ಪುಣೆ, ವಿಜಯವಾಡ ಏರ್‌ಪೋರ್ಟ್‌ಗಳಲ್ಲಿ 2023ರ ಮಾರ್ಚ್ ವೇಳೆಗೆ ಸಿಗಲಿದೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಗುರುವಾರ, ಈ ಡಿಜಿ ಯಾತ್ರಾವನ್ನು ಉದ್ಘಾಟಿಸಿದರು. ಡಿಜಿ ಯಾತ್ರೆಯೊಂದಿಗೆ ದೇಶದ ವಿಮಾನಯಾನ ವಲಯದಲ್ಲಿ ಹೊಸ ಶಕೆಯೇ ಆರಂಭವಾಗಿದೆ. ಪ್ರಯಾಣಿಕರಿಗೆ ಯಾವುದೇ ಅಡಚಣೆಯಿಲ್ಲದೆ ವಿಮಾನ ಪ್ರಯಾಣ ಮಾಡಬಹುದು ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
ಏನಿದು ಡಿಜಿ ಯಾತ್ರಾ?
ಡಿಜಿ ಯಾತ್ರಾ ಯೋಜನೆಯಡಿಯಲ್ಲಿ, ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಬೋರ್ಡಿಂಗ್ ಪಾಸ್ ಇಲ್ಲದೆಯೂ ಪ್ರವೇಶಿಸಬಹುದು. ನಿಮ್ಮ ಮುಖವನ್ನು ನಾನಾ ಚೆಕ್ ಪಾಯಿಂಟ್‌ಗಳಲ್ಲಿ ಸಾಫ್ಟ್ ವೇರ್ ತಂತ್ರಜ್ಞಾನದ ಮೂಲಕ ತನ್ನಿಂತಾನೆ ಗುರುತಿಸಲಾಗುವುದು.
ಈ ಸೌಲಭ್ಯವನ್ನು ಪಡೆಯಬೇಕಿದ್ದರೆ, ಪ್ರಯಾಣಿಕರು ಮೊದಲು ತಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಡಿಜಿಯಾತ್ರಾ ಮೊಬೈಲ್ ಆ್ಯಪ್‌ನಲ್ಲಿ ವ್ಯಾಲಿಡೇಟ್ ಮಾಡಿಕೊಳ್ಳಬೇಕಾಗುತ್ತದೆ. ವ್ಯಾಲಿಡೇಶನ್ ಸಲುವಾಗಿ ತಮ್ಮ ಚಿತ್ರವನ್ನು ತಾವೇ ತೆಗೆದುಕೊಳ್ಳಬೇಕು. (ಸೆಲ್ಫಿ) ಆಧಾರ್ ವಿವರಗಳನ್ನು ಒದಗಿಸಬೇಕು.
ಡಿಜಿ ಯಾತ್ರಾ-ನೋಂದಣಿ ಮತ್ತು ಬಳಕೆ ಹೀಗೆ:
-ಡಿಜಿಯಾತ್ರಾ (DigiYatra) ಮತ್ತು ಡಿಜಿಲಾಕರ್ ಆ್ಯಪ್‌ಗಳನ್ನು (DigiLocker) ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
– ಡಿಜಿಯಾತ್ರಾ ಆ್ಯಪ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ಮತ್ತು ಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ.
– ಆಧಾರ್ ವಿವರಗಳನ್ನು ಡಿಜಿ ಲಾಕರ್ ಬಳಸಿ ಸಲ್ಲಿಸಿ.
ಪ್ರಯಾಣಕ್ಕೆ ಮುನ್ನ: ವಿಮಾನ ಹಾರಾಟಕ್ಕೆ ಕನಿಷ್ಠ 1.5 ಗಂಟೆಗೆ ಮುನ್ನ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಇ-ಗೇಟ್‌ನಲ್ಲಿ ತಮ್ಮ ಬೋರ್ಡಿಂಗ್ ಪಾಸ್ ಮೇಲಿನ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದನ್ನು ಮಾಡಿದ ಬಳಿಕ ಏರ್‌ಪೋರ್ಟ್ ಪ್ರವೇಶ ಮತ್ತು ವಿಮಾನ ಹತ್ತಲು ಬೋರ್ಡಿಂಗ್ ಪಾಸ್‌ನ ಅಗತ್ಯ ಇರುವುದಿಲ್ಲ. ಇ-ಗೇಟ್‌ನಲ್ಲಿರುವ ಫೇಶಿಯಲ್ ರೆಕಗ್ನಿಶನ್ ಸಿಸ್ಟಮ್, ಪ್ರಯಾಣಿಕರ ಗುರುತನ್ನು ಮತ್ತು ಟ್ರಾವೆಲ್ ಡಾಕ್ಯುಮೆಂಟ್‌ಗಳನ್ನು ವ್ಯಾಲಿಡೇಟ್ ಮಾಡುತ್ತದೆ. ಈ ಪ್ರಕ್ರಿಯೆಯ ಬಳಿಕ ಇ-ಗೇಟ್, ಪ್ರಯಾಣಿಕರಿಗೆ ತೆರೆದುಕೊಳ್ಳುತ್ತದೆ.
ಭದ್ರತೆ ಹೆಚ್ಚಳ: ಡಿಜಿಯಾತ್ರಾ ಆ್ಯಪ್ ಅನ್ನು ಆಗಸ್ಟ್ 15ರಂದು ಪ್ರಾಯೋಗಿಕವಾಗಿ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಯಿತು. ಇದು ದೇಶದ ಅತಿ ದೊಡ್ಡ ಏರ್‌ಪೋರ್ಟ್ ಕೂಡಾ ಆಗಿದೆ. ಡಿಜಿಯಾತ್ರಾ, ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿಯನ್ನು ಆಧರಿಸಿದ್ದು, ಬೋರ್ಡಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಏರ್‌ಪೋರ್ಟ್ ಭದ್ರತೆಯನ್ನೂ ಡಿಜಿಯಾತ್ರಾ ಹೆಚ್ಚಿಸುತ್ತದೆ. ಏಕೆಂದರೆ ಇಲ್ಲಿ ಪ್ರಯಾಣಿಕರ ಡೇಟಾ ಪರಿಶೀಲನೆಯನ್ನು ಏರ್‌ಲೈನ್ಸ್ ಡಿಪಾರ್ಚರ್ ಕಂಟ್ರೋಲ್ ಸಿಸ್ಟಮ್ ನಿರ್ವಹಿಸುತ್ತದೆ. ನಿಯೋಜಿತ ಪ್ರಯಾಣಿಕರು ಮಾತ್ರ ಟರ್ಮಿನಲ್ ಅನ್ನು ಪ್ರವೇಶಿಸುತ್ತಾರೆ. ಹೀಗಾಗಿ ಏರ್ ಪೋರ್ಟ್ ಭದ್ರತೆ ಹೆಚ್ಚಲಿದೆ.