ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಮೊಟ್ಟ ಮೊದಲ ಪ್ರಾಯೋಗಿಕ ಡಿಜಿಟಲ್ ಕರೆನ್ಸಿಯನ್ನು (Digital Rupee) ನವೆಂಬರ್ 1ಕ್ಕೆ (ಮಂಗಳ ವಾರ) ಬಿಡುಗಡೆಗೊಳಿಸಲಿದೆ. ಸಗಟು (Wholesale) ವಿಭಾಗದಲ್ಲಿ ಡಿಜಿಟಲ್ ಕರೆನ್ಸಿ ಮೊದಲು ಬಿಡುಗಡೆಯಾಗುತ್ತಿದೆ. ಅದೂ ಸರ್ಕಾರಿ ಸಾಲಪತ್ರಗಳ ವಹಿವಾಟಿನಲ್ಲಿ ಮೊದಲ ಸಲ ಬಳಕೆಯಾಗಲಿದೆ.
ಸರ್ಕಾರಿ ಸಾಲಪತ್ರಗಳ (Government securities) ಸೆಕೆಂಡರಿ ಮಾರುಕಟ್ಟೆ ವರ್ಗಾವಣೆಗಳಲ್ಲಿ ಡಿಜಿಟಲ್ ಕರೆನ್ಸಿ ರೂಪಾಯಿಯನ್ನು ಬಳಕೆಗೆ ನವೆಂಬರ್ 1ರಿಂದ ಅನುಮತಿ ನೀಡಲಾಗುವುದು. ಬ್ಯಾಂಕ್‌ಗಳ ನಡುವೆ ಡಿಜಿಟಲ್ ವರ್ಗಾವಣೆಗೆ ಬಳಕೆಯಿಂದ, ವರ್ಗಾವಣೆಯ ವೆಚ್ಚ ಕಡಿಮೆಯಾಗಲಿದೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿಯನ್ನು ಈ ಪ್ರಾಯೋಗಿಕ ಯೋಜನೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ.
ಡಿಸೆಂಬರ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ, ನಿರ್ದಿಷ್ಟ ಗುಂಪುಗಳ ನಡುವೆ ರಿಟೇಲ್ ಹಣಕಸು ವರ್ಗಾವಣೆಗಳಲ್ಲಿ ಕೂಡ ಡಿಜಿಟಲ್ ಕರೆನ್ಸಿ ಬಳಕೆಯಾಗಲಿದೆ.
ಇದನ್ನೂ ಓದಿ: Digital currency: ಭಾರತದ ಡಿಜಿಟಲ್ ಕರೆನ್ಸಿ ಹಂತಗಳಲ್ಲಿ ಚಲಾವಣೆ ಸಾಧ್ಯತೆ, ಆರ್‌ಬಿಐ ವಾರ್ಷಿಕ ವರದಿ ಇಂಗಿತ