ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಿಟೇಲ್ ಡಿಜಿಟಲ್ ರೂಪಾಯಿ (Digital Rupee) 2022ರ ಡಿಸೆಂಬರ್ 1ಕ್ಕೆ ಬೆಂಗಳೂರು, ದಿಲ್ಲಿ, ಮುಂಬಯಿ ಮತ್ತು ಭುವನೇಶ್ವರದಲ್ಲಿ ಬಿಡುಗಡೆಯಾಗಲಿದೆ.
ಎರಡನೇ ಹಂತದಲ್ಲಿ ಅಹಮದಾಬಾದ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಪಟನಾ, ಶಿಮ್ಲಾದಲ್ಲಿ ಎರಡನೇ ಹಂತದಲ್ಲಿ ವಿಸ್ತರಣೆಯಾಗಲಿದೆ.
ರಿಟೇಲ್ ಡಿಜಿಟಲ್ ರೂಪಾಯಿಯನ್ನು ನಿಗದಿತ ಸ್ಥಳಗಳಲ್ಲಿ ಕ್ಲೋಸ್ಡ್ ಯೂಸರ್ ಗ್ರೂಪ್‌ಗಳಲ್ಲಿನ ಬಳಕೆದಾರರು ಮತ್ತು ವರ್ತಕರು ಮೊದಲು ಬಳಸಲಿದ್ದಾರೆ. ಡಿಜಿಟಲ್ ಟೋಕನ್ ರೂಪದಲ್ಲಿ ಇದು ಜಾರಿಗೆ ಬರಲಿದೆ. ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಮುಖಬೆಲೆಯಲ್ಲಿಯೇ ಡಿಜಿಟಲ್ ರೂಪಾಯಿ ಬಿಡುಗಡೆಯಾಗಲಿದೆ. ನಿಗದಿತ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಬಿಡುಗಡೆಯಾಗಲಿದೆ.
ಡಿಜಿಟಲ್ ರೂಪಾಯಿಯನ್ನು ಮೊಬೈಲ್ ಫೋನ್‌ಗಳಲ್ಲಿ ಸ್ಟೋರ್ ಮಾಡಬಹುದು. ಇದಕ್ಕಾಗಿ ಪಾರ್ಟಿಸಿಪೇಟಿಂಗ್ ಬ್ಯಾಂಕ್‌ಗಳು ಡಿಜಿಟಲ್ ವ್ಯಾಲೆಟ್‌ಗಳನ್ನು ನೀಡಲಿವೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವರ್ತಕರಿಗೆ (P2M) ಡಿಜಿಟಲ್ ರೂಪಾಯಿಯನ್ನು ವರ್ಗಾವಣೆ ಮಾಡಬಹುದು ಎಂದು ಆರ್‌ಬಿಐ ತಿಳಿಸಿದೆ. ಕ್ಯೂಆರ್ ಕೋಡ್ ಬಳಸಿಯೂ ಡಿಜಿಟಲ್ ರೂಪಾಯಿಯನ್ನು ವರ್ಗಾಯಿಸಬಹುದು.
ಆರ್‌ಬಿಐ 8 ಬ್ಯಾಂಕ್‌ಗಳನ್ನು ಈ ಪ್ರಾಯೋಗಿಕ ಯೋಜನೆಯಲ್ಲಿ ಅನುಷ್ಠಾನಕ್ಕೆ ಆಯ್ಕೆ ಮಾಡಿದೆ. ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನಾಲ್ಕು ನಗರಗಳಲ್ಲಿ ಕಾರ್ಯಪ್ರವೃತ್ತವಾಗಲಿದೆ. ಬಳಿಕ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಬಳಿಕ ಭಾಗವಹಿಸಲಿದೆ.