ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ನೇರ ವಿಮಾನ ಹಾರಾಟ (Bengaluru-Sydney flight ) ಬುಧವಾರ ಆರಂಭವಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊಟ್ಟ ಮೊದಲ ಬಾರಿಗೆ ಬುಧವಾರ ಸಿಡ್ನಿಗೆ ನೇರವಾಗಿ ವಿಮಾನ ಹಾರಾಟ ಶುರುವಾಯಿತು. ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್‌ಲೈನ್ ಮೊದಲ ಬಾರಿಗೆ, ಬೆಂಗಳೂರು-ಸಿಡ್ನಿ ನಡುವೆ ನೇರ ವಿಮಾನ ಹಾರಾಟವನ್ನು ಆರಂಭಿಸಿದೆ.
ಕ್ವಾಂಟಾಸ್ ಏರ್‌ಲೈನ್‌ನ ಕ್ಯುಎಫ್ 67 ವಿಮಾನವು ಸಿಡ್ನಿ ಮತ್ತು ಬೆಂಗಳೂರು ನಡುವೆ ಪ್ರತಿ ವಾರ ನಾಲ್ಕು ಸಲ ವಿಮಾನ ಹಾರಾಟ ನಡೆಸಲಿದೆ. ಮೆಲ್ಬೋರ್ನ್-ದಿಲ್ಲಿ ನಡುವೆ ವಾರಕ್ಕೆ 4 ಸಲ ಹಾರಾಟ ನಡೆಯುತ್ತಿದೆ. ಬೆಂಗಳೂರಿನಿಂದ ಸಿಡ್ನಿಗೆ ಕ್ವಾಂಟಾಸ್ ತನ್ನ ಏರ್‌ಬಸ್ ಎ330 ವಿಮಾನವನ್ನು ಬಳಸಲಿದೆ.
ಇದರೊಂದಿಗೆ ದಕ್ಷಿಣ ಭಾರತದಿಂದ ಮೊದಲ ಸಲ ಆಸ್ಟ್ರೇಲಿಯಾಗೆ ನೇರ ವಿಮಾನ ಸಂಪರ್ಕ ಏರ್ಪಟ್ಟಂತಾಗಿದೆ. ಬೆಂಗಳೂರಿನಿಂದ ಸಿಡ್ನಿಗೆ ವಿಮಾನ ಹಾರಾಟಕ್ಕೆ 11 ಗಂಟೆಗಳ ಅವಧಿ ಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರಿಗೆ ಉಭಯ ನಗರಗಳ ನಡುವೆ ಹಾರಾಟದ ಸಮಯದಲ್ಲಿ ಮೂರು ಗಂಟೆ ಉಳಿತಾಯವಾಗುತ್ತದೆ.