ತೆರಿಗೆಗಳಲ್ಲಿ ಎರಡು ಪ್ರಮುಖ ವಿಧಗಳಿವೆ. ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆ. (Direct & Indirect tax ) ನಿಮ್ಮಿಂದ ನೇರವಾಗಿ ಪಡೆಯುವ ತೆರಿಗೆಯೇ ನೇರ ತೆರಿಗೆ. ಆದರೆ ನಿಮ್ಮಿಂದ ಪರೋಕ್ಷವಾಗಿ ಸಂಗ್ರಹಿಸುವ ತೆರಿಗೆಯೇ ಪರೋಕ್ಷ ತೆರಿಗೆ. ನೇರ ತೆರಿಗೆಗೆ ಉದಾಹರಣೆ ಯಾವುದು ಎಂದರೆ ವೈಯಕ್ತಿಕ ಆದಾಯ ತೆರಿಗೆ. ಇದನ್ನು ಅರ್ಹರಿಂದ ನೇರವಾಗಿ ಸಂಗ್ರಹಿಸಲಾಗುತ್ತದೆ. ಪರೋಕ್ಷ ತೆರಿಗೆಯಲ್ಲಿ ನೀವು ಯಾರಿಗೋ ತೆರಿಗೆ ಹಣವನ್ನು ಕೊಡುತ್ತೀರಿ. ಅವರು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಉದಾಹರಣೆಗೆ ಜಿಎಸ್‌ಟಿ ( ಸರಕು ಮತ್ತು ಸೇವಾ ತೆರಿಗೆ)
ನೇರ ತೆರಿಗೆಯು ಅದಕ್ಕೆ ಅರ್ಹ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಉದಾಹರಣೆಗೆ ವೈಯಕ್ತಿಕ ಆದಾಯ ತೆರಿಗೆಯು ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಅನ್ವಯವಾಗುತ್ತದೆ. ಹಿರಿಯ ನಾಗರಿಕರಿಗೆ 3 ಲಕ್ಷ ರೂ. ಆದಾಯದ ತನಕ ವಿನಾಯಿತಿ ಇದೆ. ಸರ್ಕಾರ ಒಬ್ಬ ವ್ಯಕ್ತಿಗೆ ನಿಮ್ಮ ಆದಾಯ ತೀರಾ ಕಡಿಮೆ ಇದೆ, ಹೀಗಾಗಿ ಯಾವುದೇ ತೆರಿಗೆ ಕೊಡಬೇಕಾದ ಅಗತ್ಯ ಇಲ್ಲ ಎನ್ನಬಹುದು, ಅದೇ ವೇಳೆ ಮತ್ತೊಬ್ಬ ವ್ಯಕ್ತಿಗೆ ನಿನ್ನ ಬಳಿ ಹೆಚ್ಚು ಆದಾಯ ಇರುವುದರಿಂದ ಹೆಚ್ಚು ತೆರಿಗೆಯನ್ನೂ ಕೊಡಬೇಕು ಎಂದು ಬೇಡಿಕೆ ಮುಂದಿಡಬಹುದು. ಹೀಗಿದ್ದರೂ, ಪರೋಕ್ಷ ತೆರಿಗೆ ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ. ನೀವು 100 ರೂ. ದಿನಸಿ ಖರೀದಿಸುತ್ತೀರಿ, ಅದರ ಮೇಲೆ 10 ರೂ. ಜಿಎಸ್‌ಟಿ ಇದೆ ಎಂದಿಟ್ಟುಕೊಳ್ಳಿ. ನಿಮ್ಮಂತೆ ಎಲ್ಲರಿಗೂ 10 ರೂ. ಜಿಎಸ್‌ಟಿ ಅನ್ವಯವಾಗುತ್ತದೆ. ಭಿಕ್ಷುಕ ಕೂಡ 10 ರೂ. ಜಿಎಸ್‌ಟಿ ಕೊಟ್ಟೇ ಆ ದಿನಸಿ ಖರೀದಿಸಬೇಕಾಗುತ್ತದೆ. ಒಂದು ವೇಳೆ ಒಟ್ಟಾರೆ ತೆರಿಗೆ ಸಂಗ್ರಹದಿಂದಲೂ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಸರ್ಕಾರ ನೋಟುಗಳನ್ನು ಮುದ್ರಿಸಬಹುದು. ಆದರೆ ಆಗ ಹಣದುಬ್ಬರ ಅಥವಾ ಬೆಲೆ ಏರಿಕೆಯೂ ಆಗುತ್ತದೆ. ಹಣದ ಮೌಲ್ಯ ಕಡಿಮೆಯಾಗುತ್ತದೆ.
ತೆರಿಗೆದಾರರನ್ನು ವಿಶಾಲಾರ್ಥದಲ್ಲಿ ಎರಡು ವಿಧಗಳಾಗಿ ವಿಂಗಡಿಸಬಹುದು. ಟ್ಯಾಕ್ಸ್ ಪ್ಲಾನರ್ ಹಾಗೂ ಟ್ಯಾಕ್ಸ್ ಇವೇಡರ್ಸ್. ಯಾರು ಟ್ಯಾಕ್ಸ್ ಪ್ಲಾನರ್? ತೆರಿಗೆ ಯೋಜಕರು ಎಂದರೆ, ಸೂಕ್ತ ವಿಧಾನದ ಮೂಲಕ ತೆರಿಗೆ ಹೊರೆಯನ್ನು ಶೂನ್ಯ ಮಟ್ಟಕ್ಕೆ ತರುವವರು ಅಥವಾ ಸಾಧ್ಯವಾದಷ್ಟೂ ಕಡಿಮೆ ಮಾಡುವವರು. ತೆರಿಗೆ ವಂಚಕರು ಏನು ಮಾಡುತ್ತಾರೆ? ಅವರೂ ತೆರಿಗೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಬಯಸುತ್ತಾರೆ. ಆದರೆ ಇಬ್ಬರ ವಿಧಾನ ಬೇರೆ ಬೇರೆ. ಒಬ್ಬರದ್ದು ಸಕ್ರಮವಾದರೆ ಮತ್ತೊಬ್ಬರದ್ದು ಕಾನೂನುಬಾಹಿರ.
ಟ್ಯಾಕ್ಸ್ ಪ್ಲಾನರ್ ಹೇಗೆ ತೆರಿಗೆಯನ್ನು ಉಳಿಸುತ್ತಾರೆ? ಆದಾಯ ತೆರಿಗೆ ಕಾಯಿದೆಯು ತೆರಿಗೆಯನ್ನು ಕಡಿಮೆ ಮಾಡಲು ಹಲವು ದಾರಿಗಳನ್ನು ತೋರಿಸುತ್ತದೆ. ಉದಾಹರಣೆಗೆ ಸೆಕ್ಷನ್ 80- ಸಿ ಅಡಿಯಲ್ಲಿ ತೆರಿಗೆದಾರರು ವಿಮೆ ಪ್ರೀಮಿಯಂ ಮೇಲೆ, ಕೆಲವು ಮ್ಯೂಚುವಲ್ ಫಂಡ್ ಸ್ಕೀಮ್ ಹೂಡಿಕೆಯ ಮೇಲೆ, ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಟ್ಯಾಕ್ಸ್ ಪ್ಲಾನರ್ ಅದನ್ನು ಬಳಸುತ್ತಾರೆ. ಹಾಗಾದರೆ ಈ ಬಾರ್ಗೇನ್‌ನಲ್ಲಿ ಸರ್ಕಾರ ನಷ್ಟಕ್ಕೀಡಾಗುತ್ತದೆಯೇ? ಇಲ್ಲ, ಸರ್ಕಾರ ಕೆಲವು ವಿಧದಲ್ಲಿ ಗಳಿಕೆಯನ್ನೂ ಸಾಧಿಸುತ್ತದೆ.
ಸರ್ಕಾರ ತೆರಿಗೆದಾರರಿಗೆ ತೆರಿಗೆ ಉಳಿಸಲು ಕೆಲವು ಉಳಿತಾಯದ ಸಾಧನಗಳಲ್ಲಿ ಉಳಿತಾಯ ಮಾಡಲು ಪ್ರೇರೇಪಿಸುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹಣ ಬರುತ್ತದೆ. ನೀವು ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ ಖರೀದಿಸಿದರೆ, ಐದು ವರ್ಷಗಳ ತನಕ ಸರ್ಕಾರಕ್ಕೆ ಲಭಿಸುತ್ತದೆ. ನೀವು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೂ, ಎಲ್ ಐಸಿ ವಿಮೆ ಖರೀದಿಸಿದರೂ, ಸರ್ಕಾರಕ್ಕೆ ಫಂಡ್ ಸಂಗ್ರಹಿಸಲು ಅನುಕೂಲವಾಗುತ್ತದೆ. ಸರ್ಕಾರ ಈ ಹಣವನ್ನು ಸಾರ್ವಜನಿಕ ಹಣಕಾಸು ಸಂಸ್ಥೆಗಳ ಮೂಲಕ ಮತ್ತೆ ಸಾಲಕ್ಕೆ ನೀಡಬಹುದು. ಅದರಿಂದ ಉದ್ದಿಮೆ, ಉದ್ಯೋಗ, ಉತ್ಪಾದನೆ, ಅಭಿವೃದ್ಧಿ, ಜಿಡಿಪಿ ಬೆಳವಣಿಗೆ ಆಗಬಹುದು.
ಇದನ್ನೂ ಓದಿ: Budget 2024: ಹೊಸ ತೆರಿಗೆ ಪದ್ಧತಿಗೆ 80ಡಿ ವಿಸ್ತರಣೆ; ತೆರಿಗೆ ಕಡಿತದ ಮಿತಿ ಹೆಚ್ಚಳ ಸಾಧ್ಯತೆ!
ತೆರಿಗೆ ವಂಚಕರು ತೆರಿಗೆಯನ್ನು ಪಾವತಿಸುವುದಿಲ್ಲ. ಆದಾಯವನ್ನೂ ಘೋಷಿಸುವುದಿಲ್ಲ. ಆದಷ್ಟೂ ನಗದು ವ್ಯವಹಾರಕ್ಕೆ ಆದ್ಯತೆ ನೀಡುತ್ತಾರೆ. ತೆರಿಗೆ ವಂಚಕರು ಸಿಕ್ಕಿ ಬೀಳುವ ರಿಸ್ಕ್ ಕೂಡ ಇದ್ದೇ ಇರುತ್ತದೆ. ಪ್ರಾಪರ್ಟಿ, ಲಕ್ಸುರಿ ಕಾರು, ಎಕ್ಸ್‌ಕ್ಲೂಸಿವ್ ಕ್ಲಬ್, ಭಾರಿ ಚಿನ್ನಾಭರಣ ಖರೀದಿಸಿದರೆ ಐಟಿ ನೋಟಿಸ್ ಪಡೆಯುವ ಸಾಧ್ಯತೆ ಇದ್ದೇ ಇರುತ್ತದೆ. ಈ ಭಯ ಇದ್ದಾಗಲೇ ಭ್ರಷ್ಟರು ತಮ್ಮ ಮನೆಗಳ ಬಾತ್ ರೂಮ್‌ನ ನೆಲದಡಿಯಲ್ಲೂ ನೋಟುಗಳ ಬಂಡಲ್‌ಗಳನ್ನು ಬಚ್ಚಿಡುತ್ತಾರೆ.