ನವ ದೆಹಲಿ: ಕೇಂದ್ರ ಸರ್ಕಾರದ ನೇರ ತೆರಿಗೆ ಸಂಗ್ರಹ ( Direct tax collection) 2023-24ರಲ್ಲಿ 11% ಏರಿದ್ದು, ಜೂನ್ 17ರ ತನಕ 3,79,760 ಕೋಟಿ ರೂ.ಗೆ ಏರಿಕೆಯಾಗಿದೆ. 2022-23ರಲ್ಲಿ ಇದು 3,41,568 ಕೋಟಿ ರೂ.ನಷ್ಟಿತ್ತು. ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮತ್ತು ಸೆಕ್ಯುರಿಟೀಸ್ ಟ್ರಾನ್ಸಕ್ಷನ್ ಟ್ಯಾಕ್ಸ್ 2,22,196 ಕೋಟಿ ರೂ.ನಷ್ಟಿತ್ತು. ಮುಂಗಡ ತೆರಿಗೆಯಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಕಾರಣ.
ರಿಫಂಡ್ ಹೊಂದಾಣಿಕೆಗೆ ಮುನ್ನ ಒಟ್ಟು ನೇರ ತೆರಿಗೆ ಸಂಗ್ರಹ 4.19 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2022-23ರಲ್ಲಿ 3.71 ಲಕ್ಷ ಕೋಟಿ ರೂ.ನಷ್ಟು ಇತ್ತು. ಮುಂಗಡ ತೆರಿಗೆಯಾಗಿ 116,776 ಕೋಟಿ ರೂ, ಟಿಡಿಎಸ್ ರೂಪದಲ್ಲಿ 271,849 ಕೋಟಿ ರೂ, ಸೆಲ್ಫ್ ಅಸೆಸ್‌ಮೆಂಟ್ ಟ್ಯಾಕ್ಸ್ ರೂಪದಲ್ಲಿ 18,128 ಕೋಟಿ ರೂ, ರೆಗ್ಯುಲರ್ ಅಸೆಸ್‌ಮೆಂಟ್ ಟ್ಯಾಕ್ಸ್ ಆಗಿ 9,977 ಕೋಟಿ ರೂ. ಸಂಗ್ರಹವಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ತಿಳಿಸಿದೆ.
ಪ್ರಸಕ್ತ ಸಾಲಿನ (2023-24) ಮೊದಲ ತ್ರೈಮಾಸಿಕದಲ್ಲಿ ಅಂದರೆ ಜನವರಿ-ಮಾರ್ಚ್ ಅವಧಿಯಲ್ಲಿ 1,16,776 ಕೋಟಿ ರೂ. ಮುಂಗಡ ತೆರಿಗೆ ಸಂಗ್ರಹವಾಗಿತ್ತು. 2022-23ರ ಇದೇ ಅವಧಿಗೆ ಹೋಲಿಸಿದರೆ 13.7% ಏರಿಕೆಯಾಗಿದೆ. ಕಂಪನಿಗಳು ಮತ್ತು ಸ್ಯಾಲರಿ ಬಿಟ್ಟು ಇತರ ಮೂಲಗಳಿಂದ 10,000 ರೂ.ಗೂ ಹೆಚ್ಚು ಆದಾಯ ಇರುವ ವ್ಯಕ್ತಿಗಳು ಮುಂಗಡ ತೆರಿಗೆ ಪಾವತಿಸಬಹುದು. ಕಾರ್ಪೊರೇಟ್ ಚಟುವಟಿಕೆಗಳು ಚುರುಕಾಗಿರುವುದನ್ನೂ ಇದು ಬಿಂಬಿಸಿದೆ.
ಯಾವುದು ನೇರ ತೆರಿಗೆ? ಆದಾಯ ತೆರಿಗೆ, ಕಾರ್ಪೊರೇಷನ್ ತೆರಿಗೆ, ಪ್ರಾಪರ್ಟಿ ತೆರಿಗೆ, ಇನ್‌ಹೆರಿಟೆನ್ಸ್ ಟ್ಯಾಕ್ಸ್ ನೇರ ತೆರಿಗೆಗೆ ಉದಾಹರಣೆಗಳಾಗಿದೆ. ನೇರ ತೆರಿಗೆ ಎಂದರೆ ಹೆಸರೇ ಸೂಚಿಸುವಂತೆ ನೇರವಾಗಿ ತೆರಿಗೆದಾರರಿಗೆ ವಿಧಿಸುವ ತೆರಿಗೆ. ಇದನ್ನು ತೆರಿಗೆದಾರರು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆ ಇಲಾಖೆ ಇದುವರೆಗೆ 39,578 ಕೋಟಿ ರೂ. ರಿಫಂಡ್ ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ 30% ಏರಿಕೆಯಾಗಿದೆ. (30,414 ಕೋಟಿ ರೂ.)
ಭಾರತದ ಜಿಎಸ್‌ಟಿ ಸಂಗ್ರಹ ಮೇನಲ್ಲಿ 1,57,090 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 12% ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ. (GST) ಭಾರತ ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿತ್ತು. ಇದರೊಂದಿಗೆ ಸತತ 14 ತಿಂಗಳಿಗೆ ಸರಾಸರಿ 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ.
ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ 5ನೇ ಸಲ ಮಾಸಿಕ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಕಳೆದ ಮೇನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ 28,411 ಕೋಟಿ ರೂ, ಎಸ್‌ಜಿಎಸ್‌ಟಿ 35,828 ಕೋಟಿ ರೂ, ಐಜಿಎಸ್ ಟಿ 81,368 ಕೋಟಿ ರೂ, ಸೆಸ್ 11,489 ಕೋಟಿ ರೂ. ಸಂಗ್ರಹವಾಗಿದೆ.
ಕರ್ನಾಟಕದಲ್ಲಿ 2023ರ ಮೇನಲ್ಲಿ 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು. ಆಮದು ಮಾಡುವ ಸರಕುಗಳಿಂದ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆಯಾಗಿದೆ.
ಇದನ್ನೂ ಓದಿ: Income Tax AIS App : ಮೊಬೈಲ್‌ನಲ್ಲೇ ಟಿಡಿಎಸ್ ಮತ್ತಿತರ ಮಾಹಿತಿ ಉಚಿತವಾಗಿ ತಿಳಿಯಲು ತೆರಿಗೆ ಇಲಾಖೆಯ ಆ್ಯಪ್