Site icon Vistara News

Bank of Baroda: ಮೊಬೈಲ್ ಆಪ್‌ಗೆ ಹೊಸ ಗ್ರಾಹಕರನ್ನು ಸೇರಿಸಬೇಡಿ! ಬ್ಯಾಂಕ್ ಆಫ್‌ ಬರೋಡಾಗೆ ಆರ್‌ಬಿಐ ಆದೇಶ

Bank Of Baroda

Bank Of Baroda

ನವದೆಹಲಿ: ಸರ್ಕಾರಿ ಸ್ವಾಮ್ಯದ ಎರಡನೇ ಬೃಹತ್ ಬ್ಯಾಂಕ್ ಎನಿಸಿರುವ ಬ್ಯಾಂಕ್ ಆಫ್ ಬರೋಡಾಗೆ (Bank of Baroda) ಸಂಕಟ ಎದುರಾಗಿದೆ. ಈ ತಕ್ಷಣದಿಂದಲೇ ತನ್ನ ಬಾಬ್ ವರ್ಲ್ಡ್‌ ಆ್ಯಪ್‌ಗೆ (BOB World App) ಹೊಸ ಗ್ರಾಹಕರನ್ನು ಸೇರ್ಪಡೆ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ(Reserve Bank of India – RBI). ಗ್ರಾಹಕರನ್ನು ಹೆಚ್ಚಿಸುವ ಕ್ರಮದಲ್ಲಿ ಕೆಲವು ಮೇಲ್ವಿಚಾರಣೆಗಳು ಅಗತ್ಯವಿರುವುದರಿಂದ ಯಾವುದೇ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದು ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಆರ್‌ಬಿಐನ ಈ ನಿರ್ದೇಶನವು ಆ್ಯಪ್‌ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 35ಎ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ, ಬ್ಯಾಂಕ್ ಆಫ್ ಬರೋಡಾಗೆ ತಕ್ಷಣವೇ ಜಾರಿಗೆ ಬರುವಂತೆ, ‘ಬಾಬ್ ವರ್ಲ್ಡ್’ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಯಾವುದೇ ಹೊಸ ಗ್ರಾಹಕರನ್ನು ಸೇರಿಸದಂತೆ ಸೂಚಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆ್ಯಪ್‌ಗೆ ಹೊಸ ಗ್ರಾಹಕರನ್ನು ಸೇರಿಸುವ ವಿಧಾನದಲ್ಲಿ ಇರುವ ಕೆಲವು ಅನುಮಾನಗಳನ್ನು ಆಧರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಈ ಸುದ್ದಿಯನ್ನೂ ಓದಿ: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ನಿಶ್ಚಿತ ಠೇವಣಿಯ ಬಡ್ಡಿ ದರ ಏರಿಕೆ

ಅಲ್ಲದೇ, ಈ ಅಮಾನತ್ತಿನಿಂದಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಬಾಬ್ ವರ್ಲ್ಡ್ ಆ್ಯಪ್ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾಗೆ ತಿಳಿಸಿದೆ.

ಆ್ಯಪ್‌ದೆ ಹೆಚ್ಚಿನ ಗ್ರಾಹಕರನ್ನು ಸೇರಿಸುವ ಸಂಬಂಧ, ಬ್ಯಾಂಕ್ ಸಿಬ್ಬಂದಿಗೆ ಟಾರ್ಗೆಟ್‌ ನೀಡಿದ ಸುದ್ದಿಗಳು ವರದಿಯಾಗಿದ್ದವು. ಟಾರ್ಗೆಟ್‌ ಪೂರೈಸುವುದಕ್ಕಾಗಿ ಬ್ಯಾಂಕ್ ಸಿಬ್ಬಂದಿ, ಸಿಕ್ಕ ಸಿಕ್ಕವರೆನ್ನಲ್ಲ ಬಾಬ್ ವರ್ಲ್ಡ್ ಆ್ಯಪ್‌ಗೆ ಸೇರಿಸುತ್ತಿದ್ದಾರೆಂಬ ವರದಿಗಳಾಗಿದ್ದವು. ಕಳೆದ ಮಾರ್ಚ್, ಜುಲೈ ತಿಂಗಳಲ್ಲಿ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಜಾರ್ಖಂಡ್‌ನ ಬ್ಯಾಂಕ್ ಶಾಖೆಗಳಲ್ಲಿ ಗ್ರಾಹಕರನ್ನು ಮೊಬೈಲ್ ಆ್ಯಪ್‌ಗೆ ಸೆಳೆಯಲು, ಸಿಬ್ಬಂದಿಗೆ ಟಾರ್ಗೆಟ್ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version