ನವ ದೆಹಲಿ: ಕಳೆದ ೨೦೨೧-೨೨ನೇ ಸಾಲಿನ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಕೊನೆಯ ದಿನಾಂಕ ಇದೇ ಜುಲೈ ೩೧ ಆಗಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಐಟಿಆರ್ ಫೈಲಿಂಗ್‌ನ ಗಡುವನ್ನು ಮುಂದೂಡಿತ್ತು. ಈ ಸಲ ಕೂಡ ಅದೇ ರೀತಿ ಆಗಬಹುದೇ ಎಂಬ ಪ್ರಶ್ನೆ ಉಂಟಾಗಿದೆ.
ಇದಕ್ಕೆ ಕಾರಣವೂ ಇದೆ. ಅದು ಏನೆಂದರೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಪೋರ್ಟಲ್‌ನಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆ. ತೆರಿಗೆದಾರರು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಉಂಟಾಗುತ್ತಿರುವ ಅಡಚಣೆಗಳ ಬಗ್ಗೆ ಈ ವರ್ಷ ಕೂಡ ದೂರುಗಳನ್ನು ನೀಡುತ್ತಿದ್ದಾರೆ. ಇದು ಐಟಿ ಇಲಾಖೆಯ ಗಮನಕ್ಕೂ ಬಂದಿದೆ. ಇದುವರೆಗೆ ಐಟಿ ರಿಟರ್ನ್ ಸಲ್ಲಿಕೆ ಮಾಡಿರುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಕೊನೆಯ ದಿನಾಂಕ ಮುಂದೂಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ತಜ್ಞರು. ಒಟ್ಟು ೬ ಕೋಟಿ ತೆರಿಗೆದಾರರು ಇದ್ದಾರೆ.
ಆದಾಯ ತೆರಿಗೆ ಇಲಾಖೆ ಜುಲೈ ೨ಕ್ಕೆ ಮಾಡಿರುವ ಟ್ವೀಟ್ ಒಂದರಲ್ಲಿ, ವೆಬ್ ಪೋರ್ಟಲ್‌ನಲ್ಲಿ ತಾಂತ್ರಿಕ ಅಡಚಣೆ ಉಂಟಾಗಿರುವುದನ್ನು ಒಪ್ಪಿಕೊಂಡಿದೆ. ಈ ಬಗ್ಗೆ ಇನ್ಫೋಸಿಸ್ ಕಾರ್ಯಪ್ರವೃತ್ತವಾಗಿದ್ದು, ಕೆಲವರಿಗೆ ಅನಾನುಕೂಲ ಆಗಿರಬಹುದು. ಇದಕ್ಕಾಗಿ ವಿಷಾದಿಸುತ್ತೇವೆ ಎಂದು ತಿಳಿಸಿತ್ತು.
” ಜುಲೈ ಮೊದಲ ವಾರದಲ್ಲಿ ಕೇವಲ ೩೦ ಲಕ್ಷ ಮಂದಿ ಐಟಿಆರ್ ಸಲ್ಲಿಸಿದ್ದಾರೆ. ಜುಲೈ ೭ಕ್ಕೆ ಒಟ್ಟು ೯೯ ಲಕ್ಷ ರಿಟರ್ನ್ ಮಾತ್ರ ಸಲ್ಲಿಕೆಯಾಗಿದೆ. ೨೨ ದಿನಗಳಲ್ಲಿ ಉಳಿದವರು ಸಲ್ಲಿಸುವುದು ಅನುಮಾನ. ಆಗಸ್ಟ್ ೩೧ರ ತನಕ ಗಡುವು ವಿಸ್ತರಿಸಿದರೆ ಅನುಕೂಲʼʼ ಎನ್ನುತ್ತಾರೆ ಟ್ಯಾಕ್ಸ್ ಬುಡ್ಡಿಡಾಟ್‌ಕಾಮ್‌ನ ಸ್ಥಾಪಕ ಸುಜಿತ್ ಬಂಗಾರ್.
ಇದನ್ನೂ ಓದಿ:ವಿಸ್ತಾರ Money Guide: ಐಟಿ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆ ದಿನ, ರೆಡಿಯಾಗಿದ್ದೀರಾ?