ನವ ದೆಹಲಿ: ಹೆಸರಾಂತ ಡೊಲೊ-೬೫೦ ಮಾತ್ರೆಯ (Dolo-650) ಉತ್ಪಾದಕ, ಬೆಂಗಳೂರು ಮೂಲದ ಮೈಕ್ರೊಲ್ಯಾಬ್ಸ್, ಡೊಲೊ ಮಾತ್ರೆಯನ್ನು ಪ್ರಚಾರ ಮಾಡಲು ವೈದ್ಯರಿಗೆ ೧,೦೦೦ ಕೋಟಿ ರೂ. ಉಚಿತ ಕೊಡುಗೆಗಳ ಆಮಿಷ ನೀಡಿರುವ ಆರೋಪವನ್ನು ನಿರಾಕರಿಸಿದೆ.
” ಮೈಕ್ರೊಲ್ಯಾಬ್ಸ್ ತನ್ನ ಡೊಲೊ ೬೫೦ ಮಾತ್ರೆಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ವೈದ್ಯರಿಗೆ ೧ ವರ್ಷದಲ್ಲಿ ೧,೦೦೦ ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವಿತರಿಸಿದೆ ಎಂಬ ಕೆಲ ಮಾಧ್ಯಮ ವರದಿಗಳು ನಿರಾಧಾರವಾಗಿವೆ. ಇದು ಮೈಕ್ರೊಲ್ಯಾಬ್ಸ್‌ನ ತೇಜೋವಧೆಗೆ ಮಾಡಿರುವ ಷಡ್ಯಂತ್ರವಾಗಿದೆʼʼ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಡೊಲೊದ ವಾರ್ಷಿಕ ವ್ಯಾಪಾರವೇ ೩೬೦ ಕೋಟಿ ರೂ. ವೈದ್ಯರಿಗೆ ೧,೦೦೦ ಕೋಟಿ ರೂ. ವಿತರಣೆ ಹೇಗೆ?
ಡೊಲೊ ಮಾತ್ರೆಯ ವಾರ್ಷಿಕ ಮಾರಾಟ ಮೌಲ್ಯ ೩೬೦ ಕೋಟಿ ರೂ. ಮಾತ್ರ. ಹೀಗಿರುವಾಗ ವೈದ್ಯರಿಗೆ ೧ ವರ್ಷದಲ್ಲಿ ೧,೦೦೦ ಕೋಟಿ ರೂ. ಉಡುಗೊರೆ ಕೊಡಲು ಹೇಗೆ ಸಾಧ್ಯ. ಜತೆಗೆ ಕೋವಿಡ್ ಬಿಕ್ಕಟ್ಟಿನ ಸಂದರ್ಭ ಸರ್ಕಾರ ಡೊಲೊ ಮಾತ್ರೆಯ ಪ್ರತಿ ಗುಳಿಗೆಗೆ ೨ ರೂ.ಗಳ ದರ ಮಿತಿಯನ್ನು ವಿಧಿಸಿತ್ತು. ಅದನ್ನು ಕಂಪನಿಯೂ ಪಾಲಿಸಿತ್ತು. ಹೀಗಿರುವಾಗ ೧,೦೦೦ ಕೋಟಿ ರೂ. ವಿತರಣೆ ಹೇಗೆ ಸಾಧ್ಯ ಎಂದು ಮೈಕ್ರೊಲ್ಯಾಬ್ಸ್ ವಕ್ತಾರರು ತಿಳಿಸಿದ್ದಾರೆ.
ಮೈಕ್ರೊಲ್ಯಾಬ್ಸ್ ಕಳೆದ ಹಲವು ವರ್ಷಗಳಲ್ಲಿ ಡೊಲೊ ಮಾತ್ರೆಯ ತಯಾರಿಕೆ ಮತ್ತು ವಿತರಣೆ ಮತ್ತು ಒಟ್ಟಾರೆಯಾಗಿ ಎಲ್ಲ ವಿಭಾಗಗಳ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಆದರೆ ಡೊಲೊ ಮಾತ್ರೆ ಒಂದಕ್ಕೇ ಒಂದು ವರ್ಷದಲ್ಲಿ ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.
ಡೊಲೊ ೬೫೦ ನೆರವಿನಿಂದ ದೇಶಾದ್ಯಂತ ರೋಗಿಗಳಿಗೆ ದುಬಾರಿ ಔಷಧಗಳ ಬದಲು ಅಗ್ಗದ ದರದ ಮಾತ್ರೆ ಲಭಿಸಿದಂತಾಗಿತ್ತು. ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಸಹಕಾರಿಯಾಗಿತ್ತು. ವೈದ್ಯರೂ ಡೊಲೊ-೬೫೦ ಅನ್ನು ಇದೇ ಕಾರಣಕ್ಕಾಗಿ ಸೂಚಿಸುತ್ತಿದ್ದರು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಜ್ವರದ ಉಪಶಮನಕ್ಕೆ ಡೊಲೊ-೬೫೦ ಬಳಕೆಯಾಗುತ್ತಿತ್ತು.
ಸಂಬಂಧಪಟ್ಟ ಅಧಿಕಾರಿಗಳಿಗೆ ಡೊಲೊ ಮಾತ್ರೆ ವಹಿವಾಟಿನ ಎಲ್ಲ ವಿವರಗಳನ್ನು ನೀಡುವುದಾಗಿಯೂ ಕಂಪನಿಯ ವಕ್ತಾರರು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ಕಳೆದ ತಿಂಗಳು ಮೈಕ್ರೊಲ್ಯಾಬ್ಸ್‌ನಲ್ಲಿ ಸಂಭವನೀಯ ಆದಾಯ ತೆರಿಗೆ ಸೋರಿಕೆ ಬಗ್ಗೆ ಶೋಧ ನಡೆಸಿತ್ತು.
ಮೈಕ್ರೊಲ್ಯಾಬ್ಸ್ ವಿರುದ್ಧ ಆರೋಪಿಸಿದ್ದು ಯಾರು?
ಮೆಡಿಕಲ್ ರೆಪ್ರೆಸಂಟೇಟಿವ್ಸ್ ವಲಯದ ಸಂಘಟನೆಯಾಗಿರುವ ಫೆಡರೇಷನ್ ಆಫ್ ಮೆಡಿಕಲ್ & ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (FMRAI), ಡೊಲೊ-೬೫೦ ಮಾತ್ರೆಗಳನ್ನು ಜನಪ್ರಿಯಗೊಳಿಸಲು ಮೈಕ್ರೊಲ್ಯಾಬ್ಸ್ ವೈದ್ಯರಿಗೆ ಆಮಿಷಗಳನ್ನು ಒಡ್ಡಿದೆ. 1,000 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವಿತರಿಸಿದೆ ಎಂದು ಆರೋಪಿಸಿದೆ. ಹಾಗೂ ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್, ೧೦ ದಿನಗಳೊಳಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.