ಬೆಂಗಳೂರು: ಪ್ರತಿಭಾವಂತ ಟೆಕ್ಕಿಗಳಿಗೆ ಐಟಿ ವಲಯದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಎರಡಂಕಿಯ ಶೇಕಡಾವಾರು ಲೆಕ್ಕದಲ್ಲಿ ಭರ್ಜರಿ ವೇತನ ಏರಿಕೆ, ಬಡ್ತಿ, ಇತರ ಸೌಕರ್ಯ ಸವಲತ್ತುಗಳನ್ನು ಕೂಡ ಕಂಪನಿಗಳು ನೀಡುತ್ತಿವೆ. ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಕಸರತ್ತು ನಡೆಸುತ್ತಿವೆ.
ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಣ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.27.7ಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ಶೇ.12-13ರ ಪ್ರಮಾಣದಲ್ಲಿ ವೇತನ ಏರಿಕೆಗೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಾವಂತ ಉದ್ಯೋಗಿಗಳಿಗೆ ಶೇ.22-23 ವೇತನ ಏರಿಕೆಯನ್ನೂ ನೀಡಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 2022-23ರಲ್ಲಿ ಶೇ.7-8ರ ಮಟ್ಟದಲ್ಲಿ ಸಂಬಳ ಹೆಚ್ಚಿಸಲು ಉದ್ದೇಶಿಸಿದೆ.
ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಕೂಡ ಪ್ರತಿಭಾವಂತರಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ಸಂಬಳವನ್ನು ಹೆಚ್ಚಿಸಲಾಗುತ್ತಿದೆ. ಮೈಕ್ರೊಸಾಫ್ಟ್ ಇದಕ್ಕಾಗಿ ತನ್ನ ಬಜೆಟ್ ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟಿದೆ ಎಂದು ಸಿಇಒ ಸತ್ಯ ನಾಡೆಳ್ಳಾ ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿಭಾವಂತರಿಗೆ ಶೇ.20ರ ಸರಾಸರಿಯಲ್ಲಿ ವೇತನ ಏರಿಕೆಯಾಗುತ್ತಿದೆ ಎಂದು ಎಚ್‌ಆರ್ ತಜ್ಞರು ತಿಳಿಸಿದ್ದಾರೆ. ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೊ, ಟೆಕ್ ಮಹೀಂದ್ರಾದಲ್ಲಿ ಉದ್ಯೋಗಿಗಳ ವೆಚ್ಚದಲ್ಲಿ ಹೆಚ್ಚಳವಾಗಿದೆ.
ನೇಮಕಾತಿ ವಲಯದ ಟೀಮ್‌ಲೀಸ್ ವರದಿಯ ಪ್ರಕಾರ, ವಿಶೇಷ ಕೌಶಲದ ಅವಶ್ಯಕತೆ ಇರುವ ಉದ್ಯೋಗಿಗಳಿಗೆ ಭಾರಿ ಬೇಡಿಕೆ ಇದ್ದು, ಅವರ ವೇತನದಲ್ಲೂ ಗಣನೀಯ ಏರಿಕೆಯಾಗುತ್ತಿದೆ. ಎಬಿಸಿ ಕನ್ಸಲ್ಟೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ್ ಅಗರವಾಲ್ ಪ್ರಕಾರ ಐಟಿ ವಲಯದಲ್ಲಿ ಸರಾಸರಿ ಶೇ.12-14ರ ಲೆಕ್ಕದಲ್ಲಿ ವೇತನ ಏರಿಕೆಯಾಗಲಿದೆ. ಟಿಸಿಎಸ್ ಕಳೆದ ಅಕ್ಟೋಬರ್-ಡಿಸೆಂಬರ್‌ನಲ್ಲಿ 110,000 ಉದ್ಯೋಗಿಗಳಿಗೆ ಬಡ್ತಿ ನೀಡಿದೆ.
ಎಚ್‌ಸಿಎಲ್ ಟೆಕ್ನಾಲಜೀಸ್ ಹೊಸಬರಿಗೆ ವೇತನವನ್ನು ವಾರ್ಷಿಕ 3.6 ಲಕ್ಷ ರೂ.ಗಳಿಂದ 4.25ಲಕ್ಷ ರೂ.ಗೆ ಏರಿಸಿದೆ.
ಕಂಪನಿಗಳಿಗೆ 2021-22ರಲ್ಲಿ ಉದ್ಯೋಗಿಗಳ ವೆಚ್ಚ (ಕೋಟಿ ರೂ.ಗಳಲ್ಲಿ)
ಟಿಸಿಎಸ್ | 107,554 |
ಇನ್ಫೋಸಿಸ್ | 63,986 |
ಎಚ್‌ಸಿಎಲ್ | 46,130 |
ವಿಪ್ರೊ | 45,008 |
ಟೆಕ್ ಮಹೀಂದ್ರಾ | 22,286 |