Site icon Vistara News

ವಿಸ್ತಾರ Money Guide | ಅಂಚೆ ಇಲಾಖೆಯ ಕಿಸಾನ್‌ ವಿಕಾಸ್‌ ಪತ್ರದಲ್ಲಿ ನಿಮ್ಮ ಹಣ 10 ವರ್ಷದಲ್ಲಿ ಡಬಲ್

post office

Rent not paid so landlord locke post office

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಭಾರತದಲ್ಲಿ ಜನಪ್ರಿಯ. ಈ ವಾರ ಇವುಗಳ ಬಡ್ಡಿ ದರಗಳು ಪರಿಷ್ಕರಣೆಯಾಗುವ ನಿರೀಕ್ಷೆ ಇದೆ. ಅದರ ಪ್ರಕಾರ ಕಿಸಾನ್‌ ವಿಕಾಸ ಪತ್ರ ( Kisan Vikas Patra) ಯೋಜನೆಯೂ ಒಂದು. ಭಾರತೀಯ ಅಂಚೆ ಇಲಾಖೆ 1988ರಲ್ಲಿ ಕಿಸಾನ್‌ ವಿಕಾಸ ಪತ್ರವನ್ನು ಆರಂಭಿಸಿತು. ಪ್ರಸ್ತುತ ಇದು ವಾರ್ಷಿಕ 6.9% ಬಡ್ಡಿ ದರವನ್ನು ನೀಡುತ್ತದೆ. ಇದರ ಮೆಚ್ಯೂರಿಟಿ ಅವಧಿಯು 10 ವರ್ಷ 4 ತಿಂಗಳು. (ವಿಸ್ತಾರ Money Guide) ಈ ಅವಧಿಯಲ್ಲಿ ನಿಮ್ಮ ಹೂಡಿಕೆ ಇಮ್ಮಡಿಯಾಗುತ್ತದೆ.

ಹೂಡಿಕೆ ಹೇಗೆ? ಈ ಯೋಜನೆಯಲ್ಲಿ ಭಾರತೀಯರು ಸೇರಿಕೊಳ್ಳಬಹುದು. ಅಪ್ರಾಪ್ತರ ಪರವಾಗಿ ವಯಸ್ಕರು ಹೂಡಿಕೆ ಮಾಡಬಹುದು. ಮೂವರು ವಯಸ್ಕರು ಜಂಟಿಯಾಗಿ ಹೂಡಬಹುದು. ಅಂಚೆ ಕಚೇರಿಯಲ್ಲೂ, ಆನ್‌ಲೈನ್‌ನಲ್ಲೂ ಲಭ್ಯವಿದೆ. ಆನ್‌ಲೈನ್‌ನಲ್ಲಿ ಹೂಡಿಕೆಗೆ ಭಾರತೀಯ ಅಂಚೆಯ ವೆಬ್‌ಸೈಟ್‌ಗೆ ತೆರಳಿ ಲಾಗಿನ್‌ ಆಗಬೇಕು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಆನ್‌ಲೈನ್‌ನಲ್ಲಿ ಹೂಡಬಹುದು. ವೆಬ್‌ಸೈಟಿನಲ್ಲಿ ಕಿಸಾನ್‌ ವಿಕಾಸ ಪತ್ರ ಡೌನ್‌ಲೋಡ್‌ ಮಾಡಬಹುದು. ಅದನ್ನು ಭರ್ತಿ ಮಾಡಿ ನಿಗದಿತ ದಾಖಲೆ ಸಹಿತ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಸಲ್ಲಿಸಿ ಕೆವೈಸಿ ಪೂರ್ಣಗೊಳಿಸಬಹುದು.

ಕನಿಷ್ಠ ಹೂಡಿಕೆ ೧೦೦೦ ರೂ.

ಕಿಸಾನ್‌ ವಿಕಾಸ ಪತ್ರದಲ್ಲಿ ಕನಿಷ್ಠ 1,000 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಹೂಡಬಹುದು. ಕಿಸಾನ್‌ ವಿಕಾಸ ಪತ್ರವನ್ನು 2014ರಲ್ಲಿ ರಿಲಾಂಚ್‌ ಮಾಡಲಾಗಿತ್ತು. ಕೆಲ ಬದಲಾವಣೆಗಳನ್ನು ಸೇರಿಸಲಾಗಿತ್ತು. 50,000 ರೂ.ಗಿಂತ ಹೆಚ್ಚು ಮೊತ್ತವನ್ನು ಹೂಡುವುದಿದ್ದರೆ ಪ್ಯಾನ್‌ ಕಾರ್ಡ್‌ ಅನ್ನು ಕಡ್ಡಾಯವಾಗಿ ಕೊಡಬೇಕಾಗುತ್ತದೆ. 10 ಲಕ್ಷ ರೂ.ಗಿಂತ ಹೆಚ್ಚು ಹೂಡುವುದಿದ್ದರೆ ಅದಕ್ಕೆ ಆದಾಯ ಮೂಲದ ಆಧಾರ ಕೊಡಬೇಕಾಗುತ್ತದೆ.

ಕಿಸಾನ್‌ ವಿಕಾಸ ಪತ್ರದಲ್ಲಿ ಆದಾಯ ತೆರಿಗೆ ಪ್ರಯೋಜನ ಸಿಗುವುದಿಲ್ಲ. ಹೀಗಿದ್ದರೂ, ಠೇವಣಿಗಳು ಟಿಡಿಎಸ್‌ನಿಂದ ( ಮೂಲದಲ್ಲಿಯೇ ತೆರಿಗೆ ಕಡಿತ-Tax deduction at source) ಮುಕ್ತವಾಗಿರುತ್ತದೆ. ಮೆಚ್ಯೂರಿಟಿ ಅವಧಿ 124 ತಿಂಗಳಾಗಿದ್ದರೂ, ಸರ್ಟಿಫಿಕೇಟ್‌ ಅನ್ನು ಬಿಡುಗಡೆಯಾದ 30 ತಿಂಗಳಿನ ಬಳಿಕ ನಗದೀಕರಿಸಬಹುದು.

ಕಿಸಾನ್‌ ವಿಕಾಸ ಪತ್ರವನ್ನು ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ ಮಾಡಬಹುದು. ಒಂದು ಅಂಚೆ ಕಚೇರಿಯಿಂದ ಮತ್ತೊಂದು ಕಚೇರಿಗೆ ವರ್ಗಾಯಿಸಬಹುದು. ಅನಿವಾಸಿ ಭಾರತೀಯರು ಕಿಸಾನ್‌ ವಿಕಾಸ ಪತ್ರವನ್ನು ಖರೀದಿಸುವಂತಿಲ್ಲ.

ಕಳೆದ 2020-21ರಿಂದ ಪಿಪಿಎಫ್‌, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಇತ್ತು. ಆದರೆ ಈಗ ನಿಶ್ಚಿತ ಠೇವಣಿಗಳ ಬಡ್ಡಿ ದರಗಳು ಏರಿಕೆಯಾಗಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ. ( 2022 ಅಕ್ಟೋಬರ್-ಡಿಸೆಂಬರ್‌ ಅವಧಿಗೆ)

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ತ್ರೈಮಾಸಿಕ ಆಧಾರದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಸರ್ಕಾರಿ ಸಾಲಪತ್ರಗಳ ಬಡ್ಡಿಯ ಆಧಾರದಲ್ಲಿ ಇವುಗಳನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ:ವಿಸ್ತಾರ Money Guide | ನಿಮ್ಮ ಡೆಬಿಟ್‌, ಕ್ರೆಡಿಟ್ ಕಾರ್ಡ್‌ ಸುರಕ್ಷತೆಗೆ ಆರ್‌ಬಿಐ ಟೋಕನ್‌ ಶೀಘ್ರ, ಏನಿದು?

Exit mobile version