ನವ ದೆಹಲಿ: ಅದಾನಿ ಸಮೂಹದ ಕಂಪನಿಗಳ ಷೇರುಗಳ ದರ ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರಿ ಜಿಗಿತಕ್ಕೀಡಾಗಿದೆ. ಇದರ ಪರಿಣಾಮವಾಗಿ ಗೌತಮ್ ಅದಾನಿ (Adani) ಕಳೆದೊಂದು ವರ್ಷದಿಂದೀಚೆಗೆ ದಿನಕ್ಕೆ ಸರಾಸರಿ 1,612 ಕೋಟಿ ರೂ. ಸಂಪತ್ತು ಗಳಿಸಿದ್ದಾರೆ.
ಐಐಎಫ್‌ಎಲ್ ವೆಲ್ತ್ ಹುರಾನ್ ಇಂಡಿಯಾ ಸಂಸ್ಥೆಯ ಪ್ರಕಾರ, ಗೌತಮ್ ಅದಾನಿ ಅವರು ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಅವರನ್ನೂ ಹಿಂದಿಕ್ಕಿ ವಿಶ್ವದ ಎರಡನೇ ಸಿರಿವಂತ ಉದ್ಯಮಿ ಎನ್ನಿಸಿದ್ದಾರೆ.
ಅದಾನಿ ಸಂಪತ್ತು ಒಂದೇ ವರ್ಷದಲ್ಲಿ ಇಮ್ಮಡಿ: ಅದಾನಿ ಗ್ರೂಪ್‌ನ ಷೇರು ದರಗಳ ಅಭೂತಪೂರ್ವ ಏರಿಕೆಯ ಪರಿಣಾಮ, ಸಂಸ್ಥಾಪಕ ಗೌತಮ್ ಅದಾನಿಯವರ ಸಂಪತ್ತಿನಲ್ಲಿ 116 ಪರ್ಸೆಂಟ್ ಹೆಚ್ಚಳವಾಗಿದೆ. ಅವರ ಆದಾಯದಲ್ಲಿ 5,88,500 ಕೋಟಿ ರೂ. ಹೆಚ್ಚಳವಾಗಿದೆ. ಅದಾನಿಯವರ ಒಟ್ಟು ಸಂಪತ್ತು ಅಂದಾಜು 10,94,400 ಕೋಟಿ ರೂ.ಗಳಾಗಿದೆ.
ಕಳೆದ ಐದು ವರ್ಷಗಳಲ್ಲಿ ಅದಾನಿಯವರ ಸಂಪತ್ತು 1,440% ಹೆಚ್ಚಳವಾಗಿದೆ. ಅದಾನಿ ಸಮೂಹದ ಏಳು ಕಂಪನಿಗಳ ಷೇರು ಮೌಲ್ಯ ಗಣನೀಯ ಹೆಚ್ಚಳವಾಗಿರುವುದು ಇದಕ್ಕೆ ಕಾರಣ.