ನವ ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿರುವ 2023ರ ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕತೆ ಕೋವಿಡ್ ಬಿಕ್ಕಟ್ಟಿನಿಂದ ಸಂಪೂರ್ಣ ಚೇತರಿಸಿದೆ. ಜಗತ್ತಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. ಹಾಗೂ ಜಿಡಿಪಿ ಬೆಳವಣಿಗೆ 2022-23ರಲ್ಲಿ 7%ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ ತಂಡ ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷೆ ಪ್ರಕಾರ, ಜಾಗತಿಕ ಬಿಕ್ಕಟ್ಟಿನ ಹೊರತಾಗಿಯೂ 2023ರಲ್ಲಿ ಭಾರತ ಪ್ರಬಲ ಹಾಗೂ ವೇಗವಾಗಿ ಬೆಳೆಯುತ್ತಿರುವ ಎಕಾನಮಿಯಾಗಿ ಹೊರಹೊಮ್ಮಲಿದೆ. ಹೀಗಿದ್ದರೂ, ಭಾರತದ ಸಾಲದ ಬಡ್ಡಿ ದರ ಏರುಗತಿಯಲ್ಲಿ ಮುಂದುವರಿಯಬಹುದು ಹಾಗೂ ಹಣದುಬ್ಬರ ಸವಾಲು ಕೂಡ ಇರಬಹುದು ಎಂದು ತಿಳಿಸಿದೆ.
2023ರ ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು ಇಂತಿವೆ
ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದುಕೊಳ್ಳಲಿದೆ. ಕೋವಿಡ್ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಸಂಘರ್ಷದ ಪ್ರತಿಕೂಲ ಪರಿಣಾಮಗಳಿಂದ ಚೇತರಿಸಿದೆ. 2022-23ರಲ್ಲಿ ಬಹುತೇಕ ವಲಯಗಳಲ್ಲಿ ಚೇತರಿಕೆ ದಾಖಲಾಗಿದೆ.
ಭಾರತದ ಜಿಡಿಪಿ 2022-23ರಲ್ಲಿ 7%ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. (2021-22ರಲ್ಲಿ 8.7% ಜಿಡಿಪಿ ದಾಖಲಾಗಿತ್ತು.
ಜಿಡಿಪಿಯು 2023-24ರಲ್ಲಿ 6-6.8% ಶ್ರೇಣಿಯ ಬೆಳವಣಿಗೆ ಕಾಣಬಹುದು.
ಭಾರತವು ದೇಶೀಯ ಪ್ರಬಲ ಬೇಡಿಕೆ ( solid domestic demand) ಮತ್ತು ಬಂಡವಾಳ ಹೂಡಿಕೆಯಿಂದ ತ್ವರಿತವಾಗಿ ಚೇತರಿಸಿದೆ. ಖಾಸಗಿ ವಲಯದಲ್ಲಿನ ಹೂಡಿಕೆಯಲ್ಲೂ ಸುಧಾರಣೆ ಕಂಡು ಬಂದಿದೆ.
ಭಾರತವು ಕರೆನ್ಸಿಯ ಖರೀದಿ ಸಾಮರ್ಥ್ಯದ ಆಧಾರದಲ್ಲಿ (PPP- purchasing power parity) ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಿದೆ. ವಿದೇಶಿ ವಿನಿಮಯ ಆಧಾರದ ಲೆಕ್ಕದಲ್ಲಿ 5ನೇ ಅತಿ ದೊಡ್ಡ ಎಕಾನಮಿಯಾಗಿದೆ.
ಖಾಸಗಿ ವಲಯದ ವೆಚ್ಚಗಳು (Private consumtion) 2022-23ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ 58.5% ರಷ್ಟಿತ್ತು. ೨೦೧೪-೧೫ರಿಂದೀಚೆಗಿನ ಗರಿಷ್ಠ ಪ್ರಮಾಣ ಇದಾಗಿದೆ. ವ್ಯಾಪಾರ, ಹೋಟೆಲ್, ಸಾರಿಗೆ ಕ್ಷೇತ್ರ ಚುರುಕಾಗಿರುವುದು ಇದಕ್ಕೆ ಕಾರಣ.
ಕೇಂದ್ರ ಸರ್ಕಾರದ ಬಂಡವಾಳ ವೆಚ್ಚಗಳು, ಖಾಸಗಿ ಹೂಡಿಕೆ, ಕಾರ್ಪೊರೇಟ್ ವಲಯದ ಕಂಪನಿಗಳ ಬ್ಯಾಲೆನ್ಸ್‌ಶೀಟ್ ಅಭಿವೃದ್ಧಿ ಎಕಾನಮಿಯ ಬಲವರ್ಧನೆಗೆ ಸಹಕರಿಸಿದೆ.
ಹಣದುಬ್ಬರದ ಪರಿಣಾಮ ಸಾಲದ ಬಡ್ಡಿ ದರ ಅಧಿಕ:
ಭಾರತದ ಹಣದುಬ್ಬರ 2022ರ ಏಪ್ರಿಲ್‌ನಲ್ಲಿ 7.8%ಕ್ಕೆ ಏರಿಕೆಯಾಗಿತ್ತು. ಆರ್‌ಬಿಐ ಪ್ರಕಾರ ಹಣದುಬ್ಬರ 6% ಅನ್ನು ಮೀರಕೂಡದು. ಹೀಗಾಗಿ ಸಾಲದ ಬಡ್ಡಿ ದರಗಳು 2023-24ರಲ್ಲೂ ಉನ್ನತ ಮಟ್ಟದಲ್ಲಿ ಮುಂದುವರಿಯಬಹುದು.
ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲದ ವಿತರಣೆ ಚುರುಕಾಗಿದೆ. 2022 ಜನವರಿ-ನವೆಂಬರ್ ಅವಧಿಯಲ್ಲಿ 30.5% ಪ್ರಗತಿ ದಾಖಲಿಸಿತ್ತು. ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ (capitol expenditure) 2022-23ರ ಮೊದಲ ಎಂಟು ತಿಂಗಳಲ್ಲಿ 63% ಏರಿಕೆಯಾಗಿತ್ತು.
ಚಾಲ್ತಿ ಖಾತೆ ಕೊರತೆ ಹೆಚ್ಚಿದರೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೇಲೆ ಒತ್ತಡ ಉಂಟಾಗಬಹುದು.
ರಫ್ತು ಏರಿಕೆ: ೨೦೨೨-೨೩ರ ಮೊದಲಾರ್ಧದಲ್ಲಿ ರಫ್ತಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿತ್ತು. ಎಲೆಕ್ಟ್ರಾನಿಕ್ಸ್ ರಫ್ತು ಮೂರು ಪಟ್ಟು ಹೆಚ್ಚಳವಾಗಿತ್ತು.
ತೆರಿಗೆ ಸಂಗ್ರಹ ಹೆಚ್ಚಳ: 2022ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ 15.5% ಹೆಚ್ಚಳವಾಗಿದೆ. ನೇರ ತೆರಿಗೆ ಮತ್ತು ಜಿಎಸ್‌ಟಿ ಸಂಗ್ರಹ ವೃದ್ಧಿಸಿದೆ.
ಹಣಕಾಸು ನೀತಿ: ಉತ್ತಮ ವರ್ಷ: ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ 2022ರ ಏಪ್ರಿಲ್‌ನಿಂದ ಹಣಕಾಸು ನೀತಿಯನ್ನು ಬಿಗಿಗೊಳಿಸಲು ಆರಂಭಿಸಿತ್ತು. ಹಣಕಾಸು ಸಂಸ್ಥೆಗಳ ಬ್ಯಾಲೆನ್ಸ್‌ಶೀಟ್ ಅನ್ನು ಸ್ವಚ್ಛಗೊಳಿಸಲು ಶುರು ಮಾಡಲಾಗಿತ್ತು. ವಸೂಲಾಗದ ಸಾಲದ ಪ್ರಮಾಣ (NPA) ಕಡಿಮೆಯಾಗಿದೆ.
ಸಾಮಾಜಿಕ ಮೂಲಸೌಕರ್ಯ ಮತ್ತು ಉದ್ಯೋಗ: ಸಾಮಾಜಿಕ ಮೂಲ ಸೌಕರ್ಯ ವಲಯದಲ್ಲಿ ಸರ್ಕಾರದ ಹೂಡಿಕೆ ಹೆಚ್ಚಳವಾಗಿದೆ. ಸಾಮಾಜಿಕ ಕ್ಷೇತ್ರಕ್ಕೆ ವೆಚ್ಚ 9 ಲಕ್ಷ ಕೋಟಿ ರೂ.ಗಳಿಂದ 21 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಜನ್-ಧನ್ ಖಾತೆ , ಆಧಾರ್ ಮತ್ತು ಮೊಬೈಲ್ (JAM) ಮೂಲಕ ನೇರನಗದು ವಿತರಣೆ ಸುಲಭವಾಗಿದೆ. ಸೌಲಭ್ಯಗಳ ವಿತರಣೆ ಚುರುಕಾಗಿದೆ. ಕಾರ್ಮಿಕ ಮಾರುಕಟ್ಟೆ ಕೋವಿಡ್ ಪೂರ್ವ ಮಟ್ಟವನ್ನು ಮೀರಿದೆ.
ಶಿಕ್ಷಣ: 2021-22ರಲ್ಲಿ ಶಾಲೆಗಳಲ್ಲಿ ಹಾಜರಾತಿ ಚುರುಕಾಗಿದೆ. ಬಾಲಕಿಯರ ಶಿಕ್ಷಣದ ಮಟ್ಟ ಕೂಡ ಸುಧಾರಿಸಿದೆ.
ಆರೋಗ್ಯ: ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದ ವೆಚ್ಚ 2014-2019 ಅವಧಿಯಲ್ಲಿ ಸರ್ಕಾರದ ವೆಚ 64%ರಿಂದ 48%ಕ್ಕೆ ತಗ್ಗಿದೆ.
ಕೃಷಿ: ಕೃಷಿಯಲ್ಲಿ ಖಾಸಗಿ ಹೂಡಿಕೆ 2020-21ರಲ್ಲಿ 9.3% ಏರಿಕೆಯಾಗಿದೆ. ಎಂಎಸ್‌ಪಿಯನ್ನು ಕೃಷಿ ಉತ್ಪಾದನಾ ವೆಚ್ಚದ 1.5 ಪಟ್ಟಿಗೆ ನಿಗದಿಪಡಿಸಲಾಗಿದೆ. ಆಹಾರ ಧಾನ್ಯದ ಉತ್ಪಾದನೆಯಲ್ಲಿ 2021-22ರಲ್ಲಿ ಏರಿಕೆ ಕಂಡು ಬಂದಿದೆ. 31.5 ಕೋಟಿ ಟನ್ನುಗಳಿಗೆ ವೃದ್ಧಿಸಿದೆ. 2023 ಜನವರಿ 1ರಿಂದ ಒಂದು ವರ್ಷದ ಅವಧಿಗೆ 81.4 ಕೋಟಿ ಮಂದಿಗೆ ಉಚಿತ ಆಹಾರ ಧಾನ್ಯ ವಿತರಣೆಯನ್ನು ಮುಂದುವರಿಸಲಾಗಿದೆ.
ಉದ್ದಿಮೆಗಳ ಅಭಿವೃದ್ಧಿ
2022-23ರ ಮೊದಲಾರ್ಧದಲ್ಲಿ ಒಟ್ಟಾರೆ ಉದ್ದಿಮೆ ವಲಯ 3.7% ಚೇತರಿಸಿದೆ. ಉತ್ಪಾದನೆ ವೃದ್ಧಿಸಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗೆ ಸಾಲದ ವಿತರಣೆಯಲ್ಲಿ 2022 ಜೂನ್ ಬಳಿಕ 30% ಏರಿಕೆಯಾಗಿದೆ. ಔಷಧ ಕ್ಷೇತ್ರಕ್ಕೆ ಎಫ್‌ಡಿಐ ನಾಲ್ಕು ಪಟ್ಟು ವೃದ್ಧಿಸಿದೆ.
ಉತ್ಪಾದನೆ ಆಧರಿತ ಇನ್ಸೆಂಟಿವ್ (production linked incentive) ಯೋಜನೆಗಳನ್ನು 14 ಕೆಟಗರಿಗಳಿಗೆ ವಿಸ್ತರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಸೇವಾ ಕ್ಷೇತ್ರ 2023-24ರಲ್ಲಿ 9.1% ಬೆಳೆದಿದೆ. 2021ರಲ್ಲಿ ಸೇವಾ ವಲಯದ ಟಾಪ್ 10 ರಫ್ತುದಾರ ದೇಶಗಳಲ್ಲಿ ಭಾರತ ಕೂಡ ಒಂದಾಗಿತ್ತು.
ಮೂಲ ಸೌಕರ್ಯ: ಒಟ್ಟು 141 .4 ಲಕ್ಷ ಕೋಟಿ ರೂ. ಮೌಲ್ಯದ ೮೯,೧೫೧ ಯೋಜನೆಗಳು ಅನುಷ್ಠಾನದ ನಾನಾ ಹಂತಗಳಲ್ಲಿವೆ. 5.5 ಲಕ್ಷ ಕೋಟಿ ರೂ.ಗಳ 1009 ಯೋಜನೆಗಳು ಪೂರ್ಣವಾಗಿವೆ.
ಡಿಜಿಟಲ್ ಬೆಳವಣಿಗೆ:
ಯುಪಿಐ ಆಧಾರಿತ ವರ್ಗಾವಣೆಗಳ ಮೌಲ್ಯದಲ್ಲಿ 2019-22ರಲ್ಲಿ 121% ಏರಿಕೆಯಾಗಿದೆ. ೨೦೨೨ರ ಸೆಪ್ಟೆಂಬರ್ ವೇಳೆಗೆ ಒಟ್ಟು ಟೆಲಿಫೋನ್ ಚಂದಾದಾರರ ಸಂಖ್ಯೆ 117 ಕೋಟಿಗೆ ಏರಿಕೆಯಾಗಿದೆ. 98% ಬಳಕೆದಾರರು ವೈರ್‌ಲೆಸ್ ಸಂಪರ್ಕ ಗಳಿಸಿದ್ದಾರೆ. 2015-2021ರಲ್ಲಿ ಗ್ರಾಮೀಣ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ 200% ಏರಿಕೆಯಾಗಿದೆ.