Site icon Vistara News

Economic Survey 2023-24: ಇಂದು ಆರ್ಥಿಕ ಸಮೀಕ್ಷೆ ಮಂಡನೆ; ಏನಿದರ ಪ್ರಾಮುಖ್ಯತೆ? ಏನೆಲ್ಲ ಇರಲಿದೆ?

Economic Survey 2023-24

Economic Survey 2023-24

ನವದೆಹಲಿ: ಮೂರನೇ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ (Budget) ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ನಾಳೆ (ಜುಲೈ 23) ಮಂಡಿಸಲಿದ್ದಾರೆ. ಈಗಾಗಲೇ ಸಂಸತ್ತಿನ ಬಜೆಟ್‌ ಅಧಿವೇಶನವು (Budget Session 2024) ಆರಂಭವಾಗಲಿದೆ. ಬಜೆಟ್‌ ಮಂಡನೆಗೆ ಪೂರ್ವಭಾವಿಯಾಗಿ ಇಂದು (ಜುಲೈ 22) ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ (Economic Survey 2023-24). ಏನಿದು ಆರ್ಥಿಕ ಸಮೀಕ್ಷೆ? ಎಷ್ಟು ಗಂಟೆಗೆ ಮಂಡನೆಯಾಗಲಿದೆ? ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡುವುದು ಹೇಗೆ? ಮುಂತಾದ ವಿವರ ಇಲ್ಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಆರ್ಥಿಕ ಸಮೀಕ್ಷೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಸಮೀಕ್ಷೆಯು 2023-24ರ ಹಣಕಾಸು ವರ್ಷದಲ್ಲಿನ ಆರ್ಥಿಕತೆಯ ಬಗ್ಗೆ ವಿವರ ಒದಗಿಸುತ್ತದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಒಳನೋಟವನ್ನು ನೀಡುತ್ತದೆ. ಇದು ದೇಶದ ಪ್ರಮುಖ ಆರ್ಥಿಕ ದಾಖಲೆಗಳಲ್ಲಿ ಒಂದಾಗಿದ್ದು, ಇದು ಕೇಂದ್ರ ಬಜೆಟ್‌ಗೆ ವೇದಿಕೆಯನ್ನು ರೂಪಿಸುತ್ತದೆ.

ಆರ್ಥಿಕ ಸಮೀಕ್ಷೆ ಎಂದರೇನು?

ಪ್ರತಿ ವರ್ಷ ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸುವ ಮೊದಲು ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸುತ್ತಾರೆ. ಇದು ಕೂಡ ನಿರ್ಣಾಯಕ ವಾರ್ಷಿಕ ದಾಖಲೆಯಾಗಿದ್ದು, ಆಯಾ ವರ್ಷದ ಆರ್ಥಿಕ ಪ್ರಗತಿಯ ಅವಲೋಕನವಾಗಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ವಿ.ಅನಂತ ನಾಗೇಶ್ವರನ್ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ.

ಆರ್ಥಿಕ ಸಮೀಕ್ಷೆಯು ಕಳೆದ 1 ವರ್ಷದಲ್ಲಿ ಕೃಷಿ, ಸೇವೆಗಳು, ಕೈಗಾರಿಕೆಗಳು, ಸಾರ್ವಜನಿಕ ಹಣಕಾಸು ಮತ್ತು ಮೂಲಸೌಕರ್ಯಗಳಂತಹ ವಿವಿಧ ಕ್ಷೇತ್ರಗಳಲ್ಲಿನ ಭಾರತೀಯ ಆರ್ಥಿಕತೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಇದು ರಫ್ತು, ಆಮದು, ವಿದೇಶಿ ವಿನಿಮಯ ಮೀಸಲು ಮತ್ತು ಹಣಕಾಸಿನ ಅವಧಿಯಲ್ಲಿ ಹಣ ಪೂರೈಕೆಯ ಅವಲೋಕನವನ್ನೂ ನೀಡುತ್ತದೆ. ಜತೆಗೆ ಜಿಡಿಪಿ ಬೆಳವಣಿಗೆ, ಹಣದುಬ್ಬರ, ಉದ್ಯೋಗ, ವಿತ್ತೀಯ ಕೊರತೆ ಮತ್ತಿತರ ವಿವರಗಳನ್ನು ಒಳಗೊಂಡಿರುತ್ತದೆ.

ಆರ್ಥಿಕ ಸವಾಲುಗಳನ್ನು ಎದುರಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಕ್ರಮಗಳನ್ನು ಸೂಚಿಸುತ್ತದೆ. ಈ ಶಿಫಾರಸುಗಳನ್ನು ಕೇಂದ್ರದ ಬಜೆಟ್ ತಯಾರಿಯಲ್ಲಿ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಸರ್ಕಾರದ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಯಾವಾಗ ಮಂಡನೆ?

2023-24ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಅಪರಾಹ್ನ 2 ಗಂಟೆಗೆ ಮಂಡಿಸಲಾಗುತ್ತದೆ. 2:30ಕ್ಕೆ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಈ ಬಗ್ಗೆ ವಿ.ಅನಂತ ನಾಗೇಶ್ವರನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪಿಡಿಎಫ್‌ ಡೌನ್‌ಲೋಡ್‌ ಮಾಡುವ ವಿಧಾನ

ಆರ್ಥಿಕ ಸಮೀಕ್ಷಾ ವರದಿಯ ಪಿಡಿಎಫ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.indiabudget.gov.in/economicsurvey/). ಅಪರಾಹ್ನ 2:15-2:30 ಮಧ್ಯೆ ಪಿಡಿಎಫ್‌ ಪ್ರತಿ ಸಿಗಲಿದೆ.

ಏನಿರಲಿದೆ?

ಜಿಡಿಪಿ ಬೆಳವಣಿಗೆ: ಆರ್ಥಿಕ ಸಮೀಕ್ಷೆಯು ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ವಿವರಿಸುತ್ತದೆ. ಇದು ಪ್ರಸಕ್ತ ಹಣಕಾಸು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಗಳನ್ನು ಹೊಂದಿರುತ್ತದೆ. ಜತೆಗೆ ಉತ್ತಮವಾಗಿ ಬೆಳೆಯುತ್ತಿರುವ ಕ್ಷೇತ್ರಗಳು ಮತ್ತು ಹಿಂದುಳಿದಿರುವ ಕ್ಷೇತ್ರಗಳ ವಿಶ್ಲೇಷಣೆಯನ್ನು ತಿಳಿಸಲಿದೆ. ಆರ್ಥಿಕ ಸಮೀಕ್ಷೆಯು ಶೇಕಡಾ 6.5-7ರಷ್ಟು ಬೆಳವಣಿಗೆಯನ್ನು ಅಂದಾಜಿಸುವ ನಿರೀಕ್ಷೆಯಿದೆ. 2024ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 8.2ರಷ್ಟಿದೆ.

ವಿತ್ತೀಯ ಕೊರತೆ: 2024-25ರ ಮಧ್ಯಂತರ ಬಜೆಟ್‌ನಲ್ಲಿ ಭಾರತದ ವಿತ್ತೀಯ ಕೊರತೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 5.1ಕ್ಕೆ ನಿಗದಿಪಡಿಸಲಾಗಿದೆ. ಆರ್‌ಬಿಐಯ 2.1 ಲಕ್ಷ ಕೋಟಿ ರೂ. ಹೆಚ್ಚುವರಿ ವರ್ಗಾವಣೆ ಮತ್ತು ಬಲವಾದ ತೆರಿಗೆ ಸಂಗ್ರಹದ ನಡುವೆ ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 5ಕ್ಕೆ ಇಳಿಯುವ ನಿರೀಕ್ಷೆಯಿದೆ.

ಹಣದುಬ್ಬರ: ಸಗಟು ಮತ್ತು ಸಿಪಿಐ ಹಣದುಬ್ಬರ ಎರಡರ ಮೌಲ್ಯಮಾಪನವನ್ನು ಹೊಂದಿರುವ ಸಮೀಕ್ಷೆಯಲ್ಲಿ ಬೆಲೆ ಏರಿಕೆ ಪ್ರವೃತ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಇದನ್ನೂ ಓದಿ: Union Budget 2024: ಬಜೆಟ್‌ಗೂ ಮೊದಲು, ನಂತರ ಹೂಡಿಕೆ ಮಾಡುವುದು ಲಾಭವೇ? ತಜ್ಞರು ಹೇಳೋದಿಷ್ಟು

Exit mobile version