ನವದೆಹಲಿ: ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ತೈಲದ ದರದಲ್ಲಿ ಪ್ರತಿ ಲೀಟರ್‌ಗೆ 15 ರೂ. ತನಕ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ದರದಲ್ಲಿ ಇಳಿಕೆಯಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಕೂಡ ತಗ್ಗಿದೆ. ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆ ದರದಲ್ಲಿ ಲೀಟರ್‌ಗೆ 7-8 ರೂ. ಕಡಿತವಾಗಿದೆ. ಸೂರ್ಯಕಾಂತಿ ಎಣ್ಣೆ ದರದಲ್ಲಿ ಲೀಟರ್‌ಗೆ 10-15 ರೂ. ತಗ್ಗಿದೆ. ಸೋಯಾಬೀನ್ ತೈಲ ದರದಲ್ಲಿ ಲೀಟರ್‌ಗೆ 5 ರೂ. ಕಡಿತವಾಗಿದೆ.
ದರ ಇಳಿಕೆಯಾಗುತ್ತಿರುವುದರಿಂದ ವಿತರಕರು ಕೂಡ ದಾಸ್ತಾನು ಹೆಚ್ಚಿಸುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸುಧಾರಿಸುವ ಸಾಧ್ಯತೆ ಇದೆ. ಆಹಾರ ವಸ್ತುಗಳ ಬೆಲೆ ಇಳಿಸುವ ನಿಟ್ಟಿನಲ್ಲಿ ಈ ಖಾದ್ಯ ತೈಲಗಳ ದರ ಇಳಿಕೆ ನಿರ್ಣಾಯಕ. ಕಳೆದ ಒಂದು ವರ್ಷದಿಂದ ಅಡುಗೆ ಎಣ್ಣೆ ದರ ಸತತವಾಗಿ ಏರಿಕೆಯಾಗಿತ್ತು ಎಂದು ಇಂಡಿಯನ್ ವೆಜಿಟೇಬಲ್ ಆಯಿಲ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಧಾರಕರ್ ರಾವ್ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಜೆಮಿನಿ ಈಡೆಬಲ್ಸ್ ಆಂಡ್ ಫ್ಯಾಟ್ಸ್ ಕಂಪನಿಯು ತನ್ನ ಫ್ರೀಡಂ ಸನ್‌ಫ್ಲವರ್ ತೈಲ ದರದಲ್ಲಿ ಲೀಟರ್‌ಗೆ 15 ರೂ. ಕಡಿತಗೊಳಿಸಿದೆ. ಈಗ ದರ ಒಂದು ಲೀಟರ್ ಪ್ಯಾಕೇಟ್‌ನ ದರ 220 ರೂ. ಆಗಿದೆ. ಈ ವಾರ 200 ರೂ.ಗೆ ತಗ್ಗಿಸಲಿದೆ.
ಇಂಡೊನೇಷ್ಯಾ ತೈಲ ರಫ್ತಿನ ಮೇಲೆ ವಿಧಿಸಿದ್ದ ರಫ್ತು ನಿಷೇಧ ತೆರವುಗೊಳಿಸಿರುವುದರಿಂದ ಮುಂಬರುವ ದಿನಗಳಲ್ಲಿ ಆಮದು ಹೆಚ್ಚಳ ನಿರೀಕ್ಷಿಸಲಾಗಿದೆ. ಇಂಡೊನೇಷ್ಯಾದ ನಿಷೇಧ ಇದ್ದಾಗ ಆಮದು ಇಳಿದಿತ್ತು.
ಜಗತ್ತಿನಲ್ಲಿಯೇ ಭಾರತ ಅತಿ ಹೆಚ್ಚು ತಾಳೆ ಎಣ್ಣೆ ಆಮದು ಮಾಡುವ ದೇಶವಾಗಿದೆ. ಇಂಡೊನೇಷ್ಯಾ ಮತ್ತು ಮಲೇಷ್ಯಾವನ್ನು ಅವಲಂಬಿಸಿದೆ. ಭಾರತ ಪ್ರತಿ ವರ್ಷ ೧.೩೫ ಟನ್ ಖಾದ್ಯ ತೈಲವನ್ನು ಆಮದು ಮಾಡುತ್ತದೆ.