Site icon Vistara News

Education Loan : ನರ್ಸರಿಯಿಂದಲೇ ಶಿಕ್ಷಣ ಸಾಲ ಶುರುವಾಗುತ್ತೆ! ಬಡ್ಡಿ, ಅವಧಿ ಎಷ್ಟು?

books

ನಿಮಗೆ ಅಚ್ಚರಿಯಾಗಬಹುದು. ಭಾರತದಲ್ಲಿ ಈಗ ಶಿಕ್ಷಣ ಸಾಲವನ್ನು ಮಕ್ಕಳ ನರ್ಸರಿ ಶಾಲೆಯ ಹಂತದಿಂದಲೇ ಪಡೆಯಬಹುದು! ದೇಶದ ಪ್ರಮುಖ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಇದರಿಂದ ಹಾದಿ ಸುಗಮವಾಗುತ್ತದೆ. (Education Loan) ಅನೇಕ ಮಂದಿ ವಿದ್ಯಾರ್ಥಿಗಳು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರೂ, ಶಿಕ್ಷಣ ಸಾಲ ಪಡೆದು ಅನುಕೂಲ ಗಳಿಸಿದ್ದಾರೆ. ಬಯಸಿದ ಉದ್ಯೋಗ ಪಡೆದು ಸಾಲವನ್ನೂ ತೀರಿಸಿದ್ದಾರೆ. ಭಾರತದಲ್ಲಿ ಶಿಕ್ಷಣ ಸಾಲವನ್ನು ತೀರಿಸಲು 20 ವರ್ಷದ ತನಕ ಕಾಲಾವಕಾಶ ಸಿಗುತ್ತದೆ. ಬಡ್ಡಿ ದರ ವಾರ್ಷಿಕ 7%ರಿಂದ ಆರಂಭವಾಗುತ್ತದೆ. ದೇಶದಲ್ಲಿ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಲದ ನೆರವು ಪಡೆಯಬಹುದು.

ಬ್ಯಾಂಕ್‌ಗೆ ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ಸಾಲ ನೀಡಬೇಕೇ ಬೇಡವೇ ಎಂಬುದನ್ನು ಬ್ಯಾಂಕ್‌ ನಿರ್ಧರಿಸುತ್ತದೆ. ಪೂರ್ಣಕಾಲಿಕ ಅಥವಾ ಅರೆಕಾಲಿಕ ಕೋರ್ಸ್‌ಗಳಿಗೂ ಶಿಕ್ಷಣ ಸಾಲ ಪಡೆಯಬಹುದು. ಎಲ್‌ಕೆಜಿ, ಯುಕೆಜಿ ಹಂತದಿಂದಲೇ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಸಾಲವನ್ನು ಪಡೆಯಬಹುದು. ಕೇವಲ ಉನ್ನತ ಶಿಕ್ಷಣಕ್ಕೆ ಮಾತ್ರ ಶಿಕ್ಷಣ ಸಾಲ ಸಿಗುತ್ತದೆ ಎಂದು ಭಾವಿಸದಿರಿ. ಉದಾಹರಣೆಗೆ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಬರೋಡಾ ವಿದ್ಯಾ ಎಂಬ ಶಿಕ್ಷಣ ಸಾಲ ಇದೆ. ಯಾವುದೇ ಮಾನ್ಯತೆ ಪಡೆದ ಶಾಲೆಯಲ್ಲಿ ನರ್ಸರಿಯಿಂದ ಪಿಯುಸಿ ತನಕ ಮಕ್ಕಳ ಶಿಕ್ಷಣಕ್ಕೆ 4 ಲಕ್ಷ ರೂ. ತನಕ ಸಾಲವನ್ನು ಬರೋಡಾ ವಿದ್ಯಾ ಯೋಜನೆಯಡಿ ಪಡೆಯಬಹುದು. 12 ಕಂತುಗಳಲ್ಲಿ ಇದನ್ನು ಪಾವತಿಸಬಹುದು. ಬ್ಯಾಂಕ್‌ ಪ್ರಕಾರ ಇದಕ್ಕೆ ಯಾವುದೇ ಪ್ರೊಸೆಸಿಂಗ್‌ ಶುಲ್ಕ ಇಲ್ಲ. ದಾಖಲಾತಿ ಶುಲ್ಕ, ಮಾರ್ಜಿನ್‌ ಇರುವುದಿಲ್ಲ. ಬಡ್ಡಿ ದರ 12.50%.

ಪ್ರಮುಖ ಬ್ಯಾಂಕ್‌ಗಳಲ್ಲಿ ಶಿಕ್ಷಣ ಸಾಲ, ವಾರ್ಷಿಕ ಬಡ್ಡಿ ದರ ಮತ್ತು ಪ್ರೊಸೆಸಿಂಗ್‌ ಶುಲ್ಕದ ವಿವರವನ್ನು ಹೋಲಿಸೋಣ. (‌ ಮೂಲ: ಬ್ಯಾಂಕ್‌ ಬಜಾರ್‌ ಟಾಟ್‌ಕಾಮ್)

ಬ್ಯಾಂಕಿನ ಹೆಸರುಬಡ್ಡಿ ದರ (ವಾರ್ಷಿಕ)ಸಂಸ್ಕರಣಾ ಶುಲ್ಕ
ಎಸ್‌ಬಿಐ8.20%ರಿಂದ ಆರಂಭ20 ಲಕ್ಷ ರೂ. ತನಕದ ಸಾಲಕ್ಕೆ ಇಲ್ಲ, ಬಳಿಕ 10,000 ರೂ. ತನಕ ಶುಲ್ಕ.
ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ8.20%ರಿಂದ 11.50%ಭಾರತದಲ್ಲಿ ವಿದ್ಯಾರ್ಥಿಗಳಿಗೆ ಇಲ್ಲ
ಪಿಎನ್‌ಬಿ 8.55%ರಿಂದ ಶುರು250 ರೂ. ಮತ್ತು ಜಿಎಸ್‌ಟಿ
ಕೆನರಾ ಬ್ಯಾಂಕ್‌ 8.55%ರಿಂದ ಶುರು10,000 ರೂ. ತನಕ
ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌9%-15%ಸಾಲ ಮೊತ್ತದ 1.5%
ಐಡಿಬಿಐ ಬ್ಯಾಂಕ್‌9.10%ಸಾಲ ಮೊತ್ತದ 1% (ಗರಿಷ್ಠ 5,000 ರೂ.)
ಬ್ಯಾಂಕ್‌ ಆಫ್‌ ಬರೋಡಾ9.15%7.50 ಲಕ್ಷ ರೂ. ತನಕ ಸಾಲದ ಮೊತ್ತದ 1%, 10,000 ರೂ. ತನಕ.
ಬ್ಯಾಂಕ್‌ ಆಫ್‌ ಇಂಡಿಯಾ9.25%ಭಾರತದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕರಣೆ ಶುಲ್ಕ ಇಲ್ಲ
ಐಸಿಐಸಿಐ ಬ್ಯಾಂಕ್‌9.85%2% ಮತ್ತು ಜಿಎಸ್‌ಟಿ
ಎಕ್ಸಿಸ್‌ ಬ್ಯಾಂಕ್‌13.70-15.20%ಸಾಲದ 2.0% ಮತ್ತು ಜಿಎಸ್‌ಟಿ
ಕೋಟಕ್‌ ಬ್ಯಾಂಕ್16% ತನಕಇಲ್ಲ
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ10.30%-11.95%ಸಾಲದ 2.00% ಮತ್ತು ಜಿಎಸ್‌ಟಿ
ಗಮನಿಸಿ: ಈ ಬಡ್ಡಿ ದರಗಳು 2023ರ ಜೂನ್‌ನಲ್ಲಿ ಅನ್ವಯ. ಬ್ಯಾಂಕ್‌ಗಳ ನಿಯಮಾನುಸಾರ ಬದಲಾವಣೆ ಇರಬಹುದು.

ಬ್ಯಾಂಕ್‌ಗಳಲ್ಲಿ ಫಿಕ್ಸೆಡ್‌ ಅಥವಾ ಬದಲಾವಣೆ ಇರುವ ಬಡ್ಡಿ ದರದಲ್ಲಿ ಶಿಕ್ಷಣ ಸಾಲ ಪಡೆಯಬಹುದು. ಇದಕ್ಕೆ ಗ್ಯಾರಂಟಿ ಬೇಕಾಗಿರುವುದಿಲ್ಲ. ಆದರೆ ನಿರ್ದಿಷ್ಟ ಮಿತಿಗಿಂತ ಬಳಿಕ ಗ್ಯಾರಂಟಿ ಬೇಕಾಗಬಹುದು. ಉದಾಹರಣೆಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ 7.50 ಲಕ್ಷ ರೂ. ತನಕದ ಸಾಲಕ್ಕೆ ಮಾತ್ರ ಗ್ಯಾರಂಟಿ ಬೇಕಾಗುವುದಿಲ್ಲ. ಪ್ರಮುಖ ಬ್ಯಾಂಕ್‌ಗಳು 7.50 ಲಕ್ಷ ರೂ. ತನಕದ ಸಾಲಕ್ಕೆ ಅಡಮಾನ ಮುಕ್ತ ಸಾಲ ನೀಡುತ್ತವೆ. ಇದಕ್ಕೂ ದೊಡ್ಡ ಸಾಲ ಪಡೆಯಲು ವಸತಿ ಅಥವಾ ವಾಣಿಜ್ಯ ನಿವೇಶನ, ಫಿಕ್ಸೆಡ್‌ ಡೆಪಾಸಿಟ್‌ ಅನ್ನು ಅಡವಿಡಬಹುದು. 1 ಕೋಟಿ ರೂ. ತನಕವೂ ಶಿಕ್ಷಣ ಸಾಲ ಪಡೆಯಬಹುದು.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಶಿಕ್ಷಣ ಸಾಲ ಪಡೆಯಲು ಅರ್ಹತೆ ಏನು? ಭಾರತೀಯ ನಾಗರಿಕ ಆಗಿರಬೇಕು. ಅನಿವಾಸಿ ಭಾರತೀಯ, ಓವರ್‌ ಸೀಸ್‌ ಸಿಟಿಜನ್ಸ್‌ ಆಫ್‌ ಇಂಡಿಯಾ, ಪರ್ಸನ್ಸ್‌ ಆಫ್‌ ಇಂಡಿಯನ್‌ ಒರಿಜಿನ್‌, ವಿದೇಶದಲ್ಲಿ ಭಾರತೀಯ ಪೋಷಕರಿಗೆ ಜನಿಸಿ ಭಾರತದಲ್ಲಿ ಓದಲು ಬಯಸುವವರು. ಯಾವೆಲ್ಲ ಕೋರ್ಸ್‌ಗಳಿಗೆ ಶಿಕ್ಷಣ ಸಾಲ ಸಿಗುತ್ತದೆ?: ಪದವಿ ಪೂರ್ವ ಕೋರ್ಸ್‌ಗಳು, ಸ್ನಾತಕೋತ್ತರ ಕೋರ್ಸ್‌ಗಳು, ಪಿಎಚ್‌ಡಿ, ವೃತ್ತಿಪರ ಕೋರ್ಸ್‌ಗಳು, ಟೆಕ್ನಿಕಲ್‌, ಡಿಪ್ಲೊಮಾ ಕೋರ್ಸ್.‌

Exit mobile version