ಹೂವಪ್ಪ ಐ ಹೆಚ್.
ಬೆಂಗಳೂರು : ಮೊಟ್ಟೆಯ ರಫ್ತಿಗೆ ಬೇಡಿಕೆ ಹೆಚ್ಚಳವಾಗಿದ್ದು, ಸ್ಥಳೀಯವಾಗಿ ದರ ಏರಿಕೆಯಾಗಿದೆ. (Egg prices up) ಒಂದು ಮೊಟ್ಟೆಯ ಬೆಲೆ 5.50 ರೂ.ನಿಂದ 6.50 ರೂ.ಗೆ ದಿಢೀರ್ ಹೆಚ್ಚಳವಾಗಿದೆ.
ಹಬ್ಬಗಳ ಸೀಸನ್ ಮುಕ್ತಾಯವಾದ ಬಳಿಕ ಮೊಟ್ಟೆಗೆ ಡಿಮಾಂಡ್ ಕೂಡ ವೃದ್ಧಿಸಿದೆ. ಚಳಿಗಾಲದಲ್ಲಿ ಮೊಟ್ಟೆಯ ಸೇವನೆಯೂ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ 100 ಮೊಟ್ಟೆಯ ಸಗಟು ದರ 420 ರೂ. ಇತ್ತು. ಈಗ 555 ರೂ.ಗೆ ಏರಿಕೆಯಾಗಿದೆ.
ಶಾಪಿಂಗ್ ಮಾಲ್ ಗಳಲ್ಲಿ ಹಾಗೂ ಆನ್ ಲೈನಲ್ಲಿ ಒಂದು ಮೊಟ್ಟೆಯ ದರ 7 ರೂ. ವರೆಗೂ ವೃದ್ಧಿಸಿದೆ.
ರಾಜ್ಯದಲ್ಲಿ ಪ್ರತಿ ದಿನ 1.80 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತದೆ. ಪಕ್ಕದ ತಮಿಳುನಾಡಿನಲ್ಲಿ ಒಂದು ದಿನಕ್ಕೆ 1 ಕೋಟಿಗೂ ಹೆಚ್ಚು ಉತ್ಪಾದನೆಯಾಗುತ್ತದೆ. ಬೆಂಗಳೂರಿನಲ್ಲಿ ದಿನಕ್ಕೆ 70-80 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ.
ತಮಿಳುನಾಡಿನಿಂದ ಬೆಂಗಳೂರಿಗೆ ದಿನಕ್ಕೆ 40-45 ಲಕ್ಷ ಮೊಟ್ಟೆ ಪೂರೈಕೆಯಾಗುತ್ತದೆ. ಈ ಬಾರಿ ಟರ್ಕಿಯಲ್ಲಿ ಮೊಟ್ಟೆ ಉತ್ಪಾದನೆಯ ಕೊರತೆಯಾಗಿದೆ. ಹೀಗಾಗಿ ಅಮೆರಿಕ ಮತ್ತು ಕತಾರ್ ಗೆ ಭಾರತದಿಂದ ಪ್ರತಿ ದಿನ ಅಂದಾಜು 40-50 ಲಕ್ಷ ಮೊಟ್ಟೆ ರಫ್ತಾಗುತ್ತಿದೆ. ಇದು ಕೂಡ ದರ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಬೆಂಗಳೂರಿನ ಗಂಗೇನಹಳ್ಳಿ ಮೊಟ್ಟೆ ಘಟಕದ ವ್ಯವಸ್ಥಾಪಕ ರವೀಂದ್ರ ರೆಡ್ಡಿ.
ಕೋಳಿ ಆಹಾರ ದರ ಹೆಚ್ಚಳ: ಕೋಳಿ ಸಾಕಾಣಿಕೆಯಲ್ಲಿ ಅಗತ್ಯವಿರುವ ಆಹಾರಗಳಾದ ಸೋಯಾ ಕಡಲೆಕಾಯಿ, ಸೂರ್ಯಕಾಂತಿ, ಅಕ್ಕಿ ನುಚ್ಚಿನ ದರದಲ್ಲಿ ಶೇ. 30 ತನಕ ದರ ಏರಿಕೆಯಾಗಿದೆ. ಮುಖ್ಯವಾಗಿ ಬಳಕೆಯಾಗುವ ಮೆಕ್ಕೆಜೋಳದ ಬೆಲೆ ಪ್ರತಿ ಕ್ವಿಂಟಾಲ್‌ಗೆ 1,300 ರೂ.ಗಳಿಂದ 2,300 ರೂ.ಗೆ ಏರಿಕೆಯಾಗಿದೆ. ಕಾರ್ಮಿಕರ ವೇತನ ವೆಚ್ಚದಲ್ಲೂ ಹೆಚ್ಚಳವಾಗಿದೆ. ಒಂದು ಮೊಟ್ಟೆಯ ಉತ್ಪಾದನಾ ವೆಚ್ಚ 5 ರೂ.ಗಿಂತ ಹೆಚ್ಚಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.