Site icon Vistara News

Electric vehicle: ಬ್ಯಾಟರಿ ಆಮದು ಸೂಕ್ತವಲ್ಲ ಎಂದ ನೀತಿ ಆಯೋಗ ಸದಸ್ಯ

ಹೊಸದಿಲ್ಲಿ: ದೇಶದ ನಾನಾ ಕಡೆಗಳಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಆಕಸ್ಮಿಕವಾಗಿರುವ ನಿದರ್ಶನಗಳು ಉಂಟಾಗಿವೆ. ಇದಕ್ಕೆ ಕಾರಣ ಏನಿರಬಹುದು ಹಾಗೂ ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಈ ನಡುವೆ ನೀತಿ ಆಯೋಗದ ಸದಸ್ಯ ಮತ್ತು ಹೆಸರಾಂತ ವಿಜ್ಞಾನಿ ವಿ.ಕೆ ಸಾರಸ್ವತ್ ಅವರು, ಭಾರತವು ಆಮದು ಮಾಡಿಕೊಳ್ಳುತ್ತಿರುವ ಬ್ಯಾಟರಿ ಸೆಲ್‍ಗಳು ದೇಶದ ವಾತಾವರಣಕ್ಕೆ ಸೂಕ್ತವಾಗಿ ಹೊಂದಿಕೊಳ್ಳದಿರಬಹುದು. ಸ್ಥಳೀಯವಾಗಿಯೇ ಬ್ಯಾಟರಿಗಳನ್ನು ಉತ್ಪಾದಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನ ಉತ್ಪಾದಕರಿಗೆ, ದೋಷಪೂರಿತ ಭಾಗವನ್ನು ಹಿಂತೆಗೆದುಕೊಳ್ಳುವಂತೆ ಇತ್ತೀಚೆಗೆ ಸಲಹೆ ನೀಡಿದ್ದಾರೆ.

ಬ್ಯಾಟರಿ ತಂತ್ರಜ್ಞಾನವು ವಿಕಾಸವಾಗುತ್ತಿರುವ ತಂತ್ರಜ್ಞಾನವಾಗಿದೆ. ಭಾರತ ಸದ್ಯಕ್ಕೆ ಬ್ಯಾಟರಿ ಸೆಲ್ ಗಳನ್ನು ಉತ್ಪಾದಿಸುತ್ತಿಲ್ಲ. ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
” ನಾವು ನಮ್ಮದೇ ಆದ ಬ್ಯಾಟರಿ ಸೆಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು. ಭಾರತದ ಅಧಿಕ ತಾಪಮಾನದ ವಾತಾವರಣಕ್ಕೆ ಹೊಂದಿಕೊಳ್ಳುವಂಥ ಬ್ಯಾಟರಿಯನ್ನು ಅಭಿವೃದ್ಧಿಪಡಿಸಬೇಕು” ಎಂದು ಸಾರಸ್ವತ್ ಅವರು ತಿಳಿಸಿದ್ದಾರೆ.

ಡಿಆರ್ ಡಿಒದ ಮಾಜಿ ಮುಖ್ಯಸ್ಥರೂ ಆಗಿರುವ ಸಾರಸ್ವತ್ ಅವರು, ಕಳಪೆ ಗುಣಮಟ್ಟದ ಹಾಗೂ ಅಧಿಕ ತಾಪಮಾನದ ಪರಿಸ್ಥಿತಿಗೆ ಹೊಂದಿಕೊಳ್ಳದ ಸೆಲ್ ಬ್ಯಾಟರಿಗಳಿಂದ ಬೆಂಕಿ ಆಕಸ್ಮಿಕವಾಗಬಹುದು. ಕೆಲವು ದೇಶಗಳು ಉನ್ನತ ತಾಪಮಾನಕ್ಕೆ ಒಗ್ಗುವ ಬ್ಯಾಟರಿಗಳನ್ನು ತಯಾರಿಸಿವೆ ಎಂದು ತಿಳಿಸಿದ್ದಾರೆ.

ಚೀನಾದ ಮೇಲೆ ಅವಲಂಬನೆ
ಸದ್ಯಕ್ಕೆ ಭಾರತದ ಎಲೆಕ್ಟ್ರಿಕ್ ವಾಹನ ತಯಾರಕರು ವಾಹನಗಳ ಬ್ಯಾಟರಿಗೆ ಚೀನಾದಲ್ಲಿ ಉತ್ಪಾದಿಸುವ ಬ್ಯಾಟರಿಗಳು ಮತ್ತು ಬಿಡಿಭಾಗಗಳನ್ನೇ ಅವಲಂಬಿಸಿದ್ದಾರೆ. ಇವಿಗಳ ತಯಾರಿಕಾ ವೆಚ್ಚದಲ್ಲಿ ಶೇ.40-50 ಪಾಲು ಬ್ಯಾಟರಿಗೇ ಆಗುತ್ತದೆ. ಬ್ಯಾಟರಿಗಳನ್ನು ಆಮದು ಮಾಡುವುದರಿಂದಲೇ ಇವಿಗಳ ವೆಚ್ಚ ಸಾಂಪ್ರದಾಯಿಕ ವಾಹನಗಳನ್ನು ಮೀರುತ್ತದೆ. ಆದರೆ ಸ್ಥಳೀಯವಾಗಿ ಲಿಥಿಯಂ ಬ್ಯಾಟರಿಗಳನ್ನು ತಯಾರಿಸಿದರೆ ವೆಚ್ಚವೂ ಕಡಿಮೆಯಾಗಬಹುದು. ಆದರೆ ಸ್ಥಳೀಯ ಉತ್ಪಾದನೆಗೂ ಹಲವು ಸವಾಲುಗಳಿವೆ. ಇಸ್ರೊ 10 ಕಂಪನಿಗಳಿಗೆ ಲಿಥಿಯಂ ಬ್ಯಾಟರಿ ತಂತ್ರಜ್ಞಾನವನ್ನು ವರ್ಗಾಯಿಸಿದ್ದರೂ, ಬ್ಯಾಟರಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಗೆ ಬಂದಿಲ್ಲ. ಮುಂಬರುವ ದಶಕಗಳಿಗೆ ನಿರ್ನಾಯಕವಾಗಿರುವ ಇವಿಗಳ ತಂತ್ರಜ್ಞಾನದಲ್ಲಿ ಭಾರತದ ಕಂಪನಿಗಳು ವಿಕಾಸವಾಗಬೇಕಿದೆ.

ಕಚ್ಚಾ ಸಾಮಾಗ್ರಿಗಳ ಅಭಾವ
ಎಲೆಕ್ಟ್ರಿಕ್ ವಾಹನಗಳ ಸೆಲ್ ತಯಾರಿಕೆಗೆ ಲಿಥಿಯಂ ಲೋಹ ಅಗತ್ಯ. ಭಾರತ ಪ್ರಸ್ತುತ ಬಹುತೇಕ ಲಿಥಿಯಂ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಮುಂಬರುವ ವರ್ಷಗಳಲ್ಲಿ ಬೇಡಿಕೆ ಹೆಚ್ಚಬಹುದು. 2016-18ರ ಅವಧಿಯಲ್ಲಿ ಇದರ ವೆಚ್ಚ 4 ಪಟ್ಟು ವೃದ್ಧಿಸಿದೆ. ಹೀಗಾಗಿ ದೇಶದಲ್ಲಿ ಲಿಥಿಯಂ ಲೋಹದ ನಿಕ್ಷೇಪಗಳು ಎಲ್ಲಿ ಇವೆ ಎಂಬುದನ್ನು ಸರಕಾರ ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಲಿಥಿಯಂಗೆ ಪರ್ಯಾಯವಾಗಿ ಹಾಗೂ ಸ್ಥಳೀಯವಾಗಿ ಲಭಸುವ ಕಚ್ಚಾ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ತಜ್ಞರು.

ಗುಜರಾತ್‍ನಲ್ಲಿ ಬೃಹತ್ ಘಟಕ
ಭಾರತದ ಅತಿ ದೊಡ್ಡ ಲಿಥಿಯಂ-ಇಯಾನ್ ಬ್ಯಾಟರಿ ಉತ್ಪಾದನಾ ಘಟಕವು ಗುಜರಾತ್‍ನಲ್ಲಿ ನಿರ್ಮಾಣವಾಗಲಿದೆ. 1.5 ಗಿಗಾವ್ಯಾಟ್ ಗಂಟೆಗಳ ಸಾಮಥ್ರ್ಯದ ಘಟಕ ಇದಾಗಲಿದ್ದು 6 ಆಟೊಮ್ಯಾಟಿಕ್ ಅಸೆಂಬ್ಲಿ ಲೇನ್‍ಗಳನ್ನು ಒಳಗೊಳ್ಳಲಿದೆ. ಎಕ್ಸೈಡ್ ಇಂಡಸ್ಟ್ರೀಸ್ ಮತ್ತು ಸ್ವಿಜರ್ಲೆಂಡ್ ಮೂಲದ ಲೆಕ್ಲೆನ್ ಚೆ ಎಸ್‍ಎ ಕಂಪನಿಯ ಸಹಭಾಗಿತ್ವದಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಉತ್ಪಾದನಾ ಘಟಕ ಅಸ್ತಿತ್ವಕ್ಕೆ ಬರಲಿದೆ. ಜಂಟಿ ಸಹಭಾಗಿತ್ವದ ಕಂಪನಿಯ ಹೆಸರು ನೆಕ್ಸ್‍ಚಾರ್ಜ್ ಎಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಯ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಉದ್ದಿಮೆಗೆ ಉತ್ತೇಜನ ನೀಡಲಾಗುತ್ತಿದೆ.

Exit mobile version