Site icon Vistara News

UP EV Policy | ಉತ್ತರಪ್ರದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ನೀತಿ, ಗ್ರಾಹಕರಿಗೆ ರಸ್ತೆ ತೆರಿಗೆ, ನೋಂದಣಿ ಶುಲ್ಕದಲ್ಲಿ ವಿನಾಯಿತಿ

EV UP

ಲಖನೌ: ಉತ್ತರಪ್ರದೇಶ ತನ್ನ ನೂತನ ಎಲೆಕ್ಟ್ರಿಕ್‌ ವಾಹನ ನೀತಿಗೆ ಚಾಲನೆ ನೀಡಿದ್ದು, (UP EV Policy) ರಾಜ್ಯದಲ್ಲಿ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

ಉತ್ತರಪ್ರದೇಶವನ್ನು ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಯ ಜಾಗತಿಕ ತಾಣವನ್ನಾಗಿ ಬದಲಿಸುವ ಉದ್ದೇಶವನ್ನು ನೀತಿ ಒಳಗೊಂಡಿದೆ. ಇದು ಮೂರು ಗುರಿಗಳನ್ನು ಇಟ್ಟುಕೊಂಡಿದೆ.

ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಲಾಭದಾಯಕವಾಗಿಸುವುದು, ಎಲೆಕ್ಟ್ರಿಕ್‌ ವಾಹನಗಳನ್ನು, ಬ್ಯಾಟರಿಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವವರಿಗೆ ಅನುಕೂಲ ಮಾಡಿಕೊಡುವುದು ಹಾಗೂ ಎಲೆಕ್ಟ್ರಿಕ್‌ ವಾಹನ ಉತ್ಪಾದನೆ ವಲಯಕ್ಕೆ 30,000 ಕೋಟಿ ರೂ.ಗೂ ಅಧಿಕ ಬಂಡವಾಳವನ್ನು ಆಕರ್ಷಿಸುವ, 10 ಲಕ್ಷಕ್ಕೂ ಹೆಚ್ಚು ಮಂದಿಗೆ ನೇರ-ಪರೋಕ್ಷ ಉದ್ಯೋಗ ನೀಡುವ ಗುರಿಯನ್ನು ನೀತಿ ಒಳಗೊಂಡಿದೆ.

ಖರೀದಿದಾರರಿಗೆ ಮತ್ತು ಉತ್ಪಾದಕರಿಗೆ ಲಾಭವೇನು?

ಉತ್ತರಪ್ರದೇಶದಲ್ಲಿ ಖರೀದಿಸುವ ಮತ್ತು ನೋಂದಣಿ ಮಾಡಿಸಿಕೊಳ್ಳುವ ಎಲ್ಲ ಎಲೆಕ್ಟ್ರಿಕ್‌ ವಾಹನಗಳಿಗೆ ಮೊದಲ ಮೂರು ವರ್ಷ 100% ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ ಸಿಗಲಿದೆ.

ಸರ್ಕಾರಿ ಉದ್ಯೋಗಿಗಳಿಗೆ ಎಲೆಕ್ಟ್ರಿಕ್‌ ವಾಹನಗಳನ್ನು (ಇವಿ) ಖರೀದಿಸಲು ಉತ್ತೇಜನ ನೀಡಲಾಗುವುದು. ರಾಜ್ಯ ಸರ್ಕಾರ ಇವಿ ಖರೀದಿಗೆ ಮುಂಗಡ ನೀಡಲಿದೆ. ಉತ್ಪಾದಕರಿಗೆ ಹೂಡಿಕೆಯ ಮೇಲೆ 30% ರಷ್ಟು ಬಂಡವಾಳ ಸಬ್ಸಿಡಿ ಸಿಗಲಿದೆ. ಮುದ್ರಾಂಕ ಶುಲ್ಕದ ಮರು ಪಾವತಿ ಸೌಲಭ್ಯ ಸಿಗಲಿದೆ. ಸಾರ್ವಜನಿಕ ಚಾರ್ಜಿಂಗ್‌ ಸ್ಟೇಶನ್‌ಗಳನ್ನು ಅಳವಡಿಸಲು ಸ್ಥಳವನ್ನೂ ಒದಗಿಸಲು ಸರ್ಕಾರ ಸಹಕರಿಸಲಿದೆ.

Exit mobile version