ನವ ದೆಹಲಿ: ಎಲೆಕ್ಟ್ರಾನಿಕ್ಸ್ ಕಂಪನಿಗಳು ಹಾಗೂ ಮೊಬೈಲ್ ಫೋನ್ ಉತ್ಪಾದಕರಿಗೆ ಮುಂಬರುವ ಮಾರ್ಚ್-ಮೇ ಅವಧಿಯಲ್ಲಿ ಬಿಡಿಭಾಗಗಳ ಪೂರೈಕೆಯಲ್ಲಿ ಕೊರತೆ ಉಂಟಾಗುವ ಭೀತಿ ತಲೆದೋರಿದೆ. (Electronics parts shortage) ಚೀನಾದಲ್ಲಿ ಕೋವಿಡ್ ಅಲೆಯ ಅಬ್ಬರ ಸೃಷ್ಟಿಯಾಗಿರುವುದು ಈ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಚೀನಾದ ಪೂರೈಕೆದಾರರು ನಿರ್ದಿಷ್ಟ ಸಮಯ ಮಿತಿಯಲ್ಲಿ ಬಿಡಿ ಭಾಗಗಳನ್ನು ಪೂರೈಸುವ ಖಾತರಿಯನ್ನು ನೀಡುತ್ತಿಲ್ಲ.
ಚೀನಾದಿಂದ ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣ
ಹಲವಾರು ಭಾರತೀಯ ಕಂಪನಿಗಳು ಬಿಡಿಭಾಗಗಳ ಕೊರತೆಯಾಗದಂತೆ ನೋಡಿಕೊಳ್ಳಲು ಮುಂಚಿತವಾಗಿಯೇ ಆರ್ಡರ್‌ಗಳನ್ನು ಕೊಡುತ್ತಿವೆ. ಹೀಗಿದ್ದರೂ, ಪೂರೈಕೆಯ ಖಾತರಿ ಸಿಗುತ್ತಿಲ್ಲ. ಕೋವಿಡ್ ಪರಿಣಾಮ ಚೀನಾದ ಕಾರ್ಖಾನೆಗಳಲ್ಲಿ 30-50% ಉದ್ಯೋಗಿಗಳು ಗೈರು ಹಾಜರಾಗುತ್ತಿದ್ದಾರೆ.
ಚೀನಾದಲ್ಲಿ ಜನವರಿ 22ಕ್ಕೆ ಹೊಸ ವರ್ಷಾಚರಣೆ ನಡೆಯಲಿದೆ. ಈ ಸಂದರ್ಭ 10-14ದಿನಗಳ ರಜಾ ಅವಧಿಯೂ ಇರುತ್ತದೆ. ಜತೆಗೆ ಕೋವಿಡ್ ಅಬ್ಬರವೂ ಮುಂದುವರಿದಿದೆ. ಹೀಗಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಕಂಪನಿಗಳು ಹಾಗೂ ಮೊಬೈಲ್ ಫೋನ್ ಉತ್ಪಾದಕರಿಗೆ ಮುಂಬರುವ ಮಾರ್ಚ್-ಮೇ ಅವಧಿಯಲ್ಲಿ ಬಿಡಿಭಾಗಗಳ ಪೂರೈಕೆಯಲ್ಲಿ ಕೊರತೆ ಉಂಟಾಗುವ ಆತಂಕ ಇದೆ.