Site icon Vistara News

Electronics prices : ಶಾಪಿಂಗ್‌ ಮಾಡ್ತೀರಾ, ಈ ಸಲ ಹಬ್ಬಕ್ಕೆ ಟಿವಿ, ಮೊಬೈಲ್‌, ಕಂಪ್ಯೂಟರ್‌ ಅಗ್ಗ

shopping mall

#image_title

ಕೋಲ್ಕತಾ: ಈ ಸಲದ ಹಬ್ಬದ ಸೀಸನ್‌ನಲ್ಲಿ ಟಿ.ವಿ, ಮೊಬೈಲ್‌, ಕಂಪ್ಯೂಟರ್‌ಗಳ ದರಗಳು ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (Electronics prices) ಈ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಸಾಗಣೆ ವೆಚ್ಚವು ಕೋವಿಡ್‌ ಪೂರ್ವ ಮಟ್ಟಕ್ಕೆ ಇಳಿಕೆಯಾಗಿದೆ. ಹೀಗಾಗಿ ಕಂಪನಿಗಳು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ದರ ಇಳಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಸರಕುಗಳ ದರ ಇಳಿಕೆಯ ಪರಿಣಾಮ ಕಂಪನಿಗಳಿಗೆ ಉತ್ಪಾದನೆಯ ವೆಚ್ಚ ಕೂಡ ತಗ್ಗಿದೆ. ಆದ್ದರಿಂದ ಈ ಸಲದ ದೀಪಾವಳಿಯ ವೇಳೆಗೆ ಟಿ.ವಿ, ಮೊಬೈಲ್‌, ಕಂಪ್ಯೂಟರ್‌ ದರ ಇಳಿಕೆಯಾಗಬಹುದು ಎಂದು ಇಂಡಸ್ಟ್ರಿ ತಜ್ಞರು ಹೇಳಿದ್ದಾರೆ.

ಕೋವಿಡ್‌ ಬಿಕ್ಕಟ್ಟಿನ ಬಳಿಕ ಸಾಗಣೆ ವ್ಯವಸ್ಥೆ ಅಸ್ತವ್ಯಸ್ತವಾಗಿ ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಏರಿಕೆಯಾಗಿತ್ತು. ಸಾಗಣೆ ವೆಚ್ಚ ಏರಿತ್ತು. ಆದರೆ ನಿರ್ಬಂಧಗಳು ಮುಕ್ತವಾದ ಬಳಿಕ ಪರಿಸ್ಥಿತಿ ಕೋವಿಡ್‌ ಪೂರ್ವ ಮಟ್ಟಕ್ಕೆ ಸುಧಾರಿಸಿದೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಚೀನಾದಿಂದ ಒಂದು ಕಂಟೈನರ್‌ ಅನ್ನು ಭಾರತಕ್ಕೆ ತರಲು ಸಾಗಣೆ ವೆಚ್ಚ 8000 ಡಾಲರ್‌ ತನಕ ಏರಿತ್ತು. ಈಗ ವೆಚ್ಚ 1000 ಡಾಲರ್‌ಗೆ ಇಳಿಕೆಯಾಗಿದೆ. ಸೆಮಿಕಂಡಕ್ಟರ್‌ ಚಿಪ್ ವೆಚ್ಚ ಕೂಡ‌ ಗಣನೀಯವಾಗಿ ತಗ್ಗಿದೆ. ಎಲೆಕ್ಟ್ರಾನಿಕ್ಸ್‌ ಬಿಡಿ ಭಾಗಗಳ ಸಾಗಣೆ ವೆಚ್ಚದಲ್ಲೂ 60-80% ಇಳಿಕೆಯಾಗಿದೆ. ಡಿಕ್ಸಾನ್‌ ಟೆಕ್ನಾಲಜೀಸ್‌, ಹ್ಯಾವೆಲ್ಸ್‌, ಬ್ಲೂಸ್ಟಾರ್‌ ಕಂಪನಿಗಳು ಈ ಸಲ ತನ್ನ ಆದಾಯ ಸುಧಾರಣೆಯಾಗುವ ನಿರೀಕ್ಷೆಯನ್ನು ಹೊಂದಿವೆ.

ಜಾಗತಿಕ ಮಟ್ಟದಲ್ಲಿ ಚಿಪ್‌ ಕಂಪನಿಗಳು ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ದಾಖಲೆಯ ನಷ್ಟಕ್ಕೀಡಾಗಿವೆ. ದುರ್ಬಲ ಬೇಡಿಕೆಯ ಪರಿಣಾಮ ದರಗಳು ಇಳಿದಿವೆ. ಇಂಟೆಲ್‌ ತನ್ನ ಇತಿಹಾಸದಲ್ಲಿಯೇ ಗರಿಷ್ಠ ನಷ್ಟಕ್ಕೀಡಾಗಿತ್ತು. ಅಡುಗೆ ಎಣ್ಣೆಯ ರಿಟೇಲ್‌ ದರದಲ್ಲಿ ತಕ್ಷಣದಿಂದಲೇ ಲೀಟರ್‌ಗೆ 8-12 ರೂ. ಇಳಿಸುವಂತೆ ಕೇಂದ್ರ ಸರ್ಕಾರ ಶನಿವಾರ ಖಾದ್ಯ ತೈಲ ಸಂಸ್ಥೆಗಳಿಗೆ (Edible oil prices) ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಿಟೇಲ್‌ ದರ ಇಳಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿದಿದ್ದರೂ, ಕೆಲವು ಕಂಪನಿಗಳು ರಿಟೇಲ್‌ ದರವನ್ನು ಇಳಿಸಿಲ್ಲ. ಇತರ ಬ್ರಾಂಡ್‌ಗಳಿಗಿಂತ ಹೆಚ್ಚಿನ ದರದಲ್ಲಿ ಮುಂದುವರಿಸಿವೆ. ಆದ್ದರಿಂದ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ. ಆಹಾರ ಕಾರ್ಯದರ್ಶಿ ಸಂಜೀವ್‌ ಛೋಪ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉತ್ಪಾದಕರು ಮತ್ತು ರಿಫೈನರ್‌ಗಳು ಕೂಡ ದರವನ್ನು ಇಳಿಸಬೇಕು. ಇದರಿಂದ ಯಾವುದೇ ಹಂತದಲ್ಲಿ ದರಗಳು ಇಳಿಕೆಯಾಗುವುದಿಲ್ಲ ಎಂದು ಆಹಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದಕರು ಮತ್ತು ರಿಫೈನರ್‌ಗಳಲ್ಲಿ ದರ ಇಳಿಕೆಯಾದ ಬಳಿಕ ಅದು ಗ್ರಾಹಕರಿಗೂ ವರ್ಗಾವಣೆಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Amarnath Yatra: ಅಮರನಾಥ ಯಾತ್ರೆ ವೇಳೆ ದೋಸೆ ಸೇರಿ 40 ತಿಂಡಿ ನಿಷೇಧ, ನಾನ್‌ವೆಜ್‌ ಅಲ್ಲದಿದ್ದರೂ ಏಕೆ ಕ್ರಮ?

Exit mobile version