ನ್ಯೂಯಾರ್ಕ್: ಸಾಮಾಜಿಕ ಜಾಲ ತಾಣ ಟ್ವಿಟರ್ ಕಂಪನಿಯನ್ನು ಖರೀದಿಸುವ ೪೪ ಶತಕೋಟಿ ಡಾಲರ್ ಮೊತ್ತದ (ಅಂದಾಜು ೩೪ ಲಕ್ಷ ಕೋಟಿ ರೂ.) ಡೀಲ್ ಅನ್ನು ಎಲಾನ್ ಮಸ್ಕ್ ರದ್ದುಪಡಿಸಿದ್ದಾರೆ.
ಟ್ವಿಟರ್ ತನ್ನಲ್ಲಿರುವ ನಕಲಿ ಖಾತೆಗಳ ಲೆಕ್ಕವನ್ನು ಸ್ಪಷ್ಟವಾಗಿ ಕೊಟ್ಟಿಲ್ಲ ಎಂದು ವಿಶ್ವದ ನಂ.೧ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಆರೋಪಿಸಿದ್ದಾರೆ. ಡೀಲ್ ಮುರಿದು ಬೀಳಲು ಇದೇ ಕಾರಣ ಎಂದಿದ್ದಾರೆ. ಇದೀಗ ಟ್ವಿಟರ್ ಎಲಾನ್ ಮಸ್ಕ್ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದೆ. ಈ ನಡುವೆ ಟ್ವಿಟರ್ ಆಡಳಿತ ಮಂಡಳಿ ಅಧ್ಯಕ್ಷ ಬ್ರೆಟ್ ಟೇಲರ್, ಕಂಪನಿ ಈಗಲೂ ಡೀಲ್ ಅನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದಿದ್ದಾರೆ.
ಡೀಲ್‌ನ ದರ ಮತ್ತು ಷರತ್ತುಗಳಿಗೆ ಟ್ವಿಟರ್ ಮಂಡಳಿ ಬದ್ಧವಾಗಿದ್ದು, ವಿಲೀನ ಒಪ್ಪಂದವನ್ನು ಜಾರಿಗೆ ತರಲು ಕಾನೂನು ಕ್ರಮವನ್ನೂ ಕೈಗೊಳ್ಳಲು ಚಿಂತನೆ ನಡೆಸಲಾಗುವುದು ಎಂದು ಬ್ರೆಟ್ ಟೇಲರ್ ಟ್ವೀಟ್ ಮಾಡಿದ್ದಾರೆ.
ನಕಲಿ ಖಾತೆಗಳ ವಿವರಗಳನ್ನು ನೀಡದಿದ್ದರೆ ಡೀಲ್ ಅನ್ನು ರದ್ದುಪಡಿಸುವುದಾಗಿ ಎಲಾನ್ ಮಸ್ಕ್ ಇತ್ತೀಚೆಗೆ ಎಚ್ಚರಿಸಿದ್ದರು. ಹಾಗೂ ವಿವರಗಳನ್ನು ನೀಡುವುದಾಗಿ ಟ್ವಿಟರ್ ಹೇಳಿತ್ತು. ನಕಲಿ ಖಾತೆಗಳು ಟ್ವಿಟರ್‌ನ ಒಟ್ಟು ಖಾತೆಗಳಲ್ಲಿ ೫%ಗಿಂತ ಕಡಿಮೆ ಇರುವುದನ್ನು ಸಾಬೀತುಪಡಿಸಬೇಕು ಎಂದು ಎಲಾನ್ ಮಸ್ಕ್ ಪಟ್ಟು ಹಿಡಿದಿದ್ದರು. ಟ್ವಿಟರ್ ಷೇರು ದರ ಶುಕ್ರವಾರ ೬% ಕುಸಿಯಿತು.