Site icon Vistara News

Elon Musk : ಟ್ವಿಟರ್‌ ಹಕ್ಕಿಗೆ ಎಲಾನ್‌ ಮಸ್ಕ್‌ ಶೀಘ್ರದಲ್ಲೇ ವಿದಾಯ

elon musk

ವಾಷಿಂಗ್ಟನ್:‌ ಜನಪ್ರಿಯ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ತನ್ನ ಲೋಗೊ ಆಗಿರುವ ನೀಲಿ ಹಕ್ಕಿಯನ್ನು ಶೀಘ್ರದಲ್ಲೇ ಬದಲಿಸಲಿದೆ ಎಂದು ಕಂಪನಿಯ ಸಿಇಒ ಎಲಾನ್‌ ಮಸ್ಕ್‌ (Elon Musk) ತಿಳಿಸಿದ್ದಾರೆ. ಟ್ವಿಟರ್‌ ಬ್ರಾಂಡ್‌ ಮತ್ತು ಎಲ್ಲ ಹಕ್ಕಿಗಳಿಗೆ ಶೀಘ್ರ ವಿದಾಯ ಹೇಳಲಾಗುವುದು ಎಂದು ಟ್ವೀಟ್‌ ಮೂಲಕವೇ ಮಸ್ಕ್‌ ತಿಳಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಭಾನುವಾರ ಮಧ್ಯಾಹ್ನ ಮಾಡಿರುವ ಈ ಟ್ವೀಟ್‌ ಸಂಚಲನ ಸೃಷ್ಟಿಸಿದೆ. ಎಲಾನ್‌ ಮಸ್ಕ್‌ ಅವರು x ಎಂಬ ಲೋಗೊವನ್ನು ಟ್ವೀಟ್‌ ಮಾಡಿದ್ದಾರೆ. ಈ ಲೋಗೊವನ್ನು ಇಂದು ರಾತ್ರಿ ಬಿಡುಗಡೆ ಮಾಡಿದರೆ ನಾಳೆ ವಿಶ್ವಾದ್ಯಂತ ಲೈವ್‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮಸ್ಕ್‌ ನೀಡಿಲ್ಲ.

ಈ ಹಿಂದೆ ಏಪ್ರಿಲ್‌ನಲ್ಲಿ ಟ್ವಿಟರ್‌ನ ನೀಲಿ ಹಕ್ಕಿ ಲೋಗೊವನ್ನು ತಾತ್ಕಾಲಿಕವಾಗಿ ಬದಲಿಸಿ ಡಾಗ್‌ ಕಾಯಿನ್‌ನ ಶಿಬಾ ಲೋಗೊ ಅನ್ನು ಅಳವಡಿಸಲಾಗಿತ್ತು. ಇದರ ಪರಿಣಾಮ ಈ ಕ್ರಿಪ್ಟೊ ಕರೆನ್ಸಿಯ ಮಾರುಕಟ್ಟೆ ಮೌಲ್ಯ ಗಗನಕ್ಕೇರಿತ್ತು. ಟ್ವಿಟರ್‌ ಭವಿಷ್ಯದ ದಿನಗಳಲ್ಲಿ ಸ್ವತಂತ್ರ ಕಂಪನಿಯಾಗಿ ಇರುವುದಿಲ್ಲ. ಅದು ನೂತನವಾಗಿ ರಚನೆಯಾಗಲಿರುವ ಎಕ್ಸ್‌ ಕಾರ್ಪ್‌ (X corp) ಕಂಪನಿಯಲ್ಲಿ ವಿಲೀನವಾಗಲಿದೆ.‌ ಚೀನಾದ ವಿ ಚಾಟ್‌ (WeChat) ಮಾದರಿಯಲ್ಲಿ ಸೂಪರ್‌ ಅಪ್ಲಿಕೇಶನ್‌ ತಯಾರಿಸುವ ಇಂಗಿತವೂ ಎಲಾನ್‌ ಮಸ್ಕ್‌ ಅವರಿಗೆ ಇದೆ.

ಟೆಸ್ಲಾ ಸಿಇಒ ಮತ್ತು ಸ್ಥಾಪಕ ಎಲಾನ್‌ ಮಸ್ಕ್‌ ಅವರು ಭಾರತದಲ್ಲಿ ತಮ್ಮ ಉದ್ದಿಮೆಯನ್ನು ಬೆಳೆಸಲು ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಎಲೆಕ್ಟ್ರಿಕ್‌ ಕಾರು (Tesla CEO Elon Musk ) ಉತ್ಪಾದನೆ ಘಟಕ ಸ್ಥಾಪನೆಗೆ ಆಹ್ವಾನಿಸಿದೆ.

ಇದನ್ನೂ ಓದಿ: PM Narendra Modi: ಮೋದಿಗೆ ಟ್ವಿಟರ್‌ನಲ್ಲಿ 9 ಕೋಟಿ ಫಾಲೋವರ್ಸ್! ಟ್ರಂಪ್ ಹಿಂದಿಕ್ಕಿದ ಭಾರತದ ಪ್ರಧಾನಿ

ರಾಜ್ಯದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಂಪೂರ್ಣ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್‌ ಅವರು ಶುಕ್ರವಾರ ಮಾಡಿರುವ ಟ್ವೀಟ್‌ನಲ್ಲಿ, ಭಾರತದಲ್ಲಿ ಟೆಸ್ಲಾದ ವಿಸ್ತರಣೆಗೆ ಕರ್ನಾಟಕ ಪ್ರಶಸ್ತ ತಾಣವಾಗಿದೆ. ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ಟೆಸ್ಲಾಗೆ ಅಗತ್ಯ ಸೌಲಭ್ಯಗಳನ್ನು ನೀಡಲಿದೆ. ಸ್ಟಾರ್‌ಲಿಂಕ್‌ ಸೇರಿದಂತೆ ಟೆಸ್ಲಾದ ಯೋಜನೆಗೆ ಸಹಕರಿಸಲಿದೆ ಎಂದು ತಿಳಿಸಿದ್ದಾರೆ.

Exit mobile version