ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವಿಟರ್ ಕಂಪನಿಯನ್ನು ಖರೀದಿಸುವ 3.30ಲಕ್ಷ ಕೋಟಿ ರೂ.ಗಳ ಮೆಗಾ ಡೀಲ್ ಅನ್ನು ತಾತ್ಕಾಲಿಕವಾಗಿ ತಡೆದಿರುವುದಾಗಿ ಟೆಸ್ಲಾ ಸ್ಥಾಪಕ ಎಲನ್ ಮಸ್ಕ್ ಶುಕ್ರವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲನ್ ಮಸ್ಕ್, ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ವಿವರಗಳು ಬಾಕಿ ಇರುವುದರಿಂದ ಡೀಲ್ ಅನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಟ್ವಿಟರ್‌ನ ಬಳಕೆದಾರರಲ್ಲಿ ನಕಲಿ(ಸ್ಪಾಮ್) ಖಾತೆಗಳ ಸಂಖ್ಯೆ ಶೇ.5ಕ್ಕಿಂತ ಕಡಿಮೆ ಎಂಬ ಸಂಗತಿಗೆ ಪೂರಕವಾದ ವಿವರಗಳು ಬಾಕಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶದ ವೇಳೆ ಟ್ವಿಟರ್, ಶೇ.5ಕ್ಕಿಂತ ಕಡಿಮೆ ನಕಲಿ ಅಕೌಂಟ್‌ಗಳಿವೆ ಎಂದು ತಿಳಿಸಿತ್ತು.
ಟ್ವಿಟರ್ 22.9 ಕೋಟಿ ಬಳಕೆದಾರರನ್ನು ಒಳಗೊಂಡಿದೆ. ಟ್ವಿಟರ್ ಕಂಪನಿ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿಲ್ಲ. ಒಟ್ಟು 44 ಶತಕೋಟಿ ಡಾಲರ್‌ಗಳ (ಅಂದಾಜು 3.30 ಲಕ್ಷ ಕೋಟಿ ರೂ.) ಮೆಗಾ ಡೀಲ್ ಇದಾಗಿದೆ.
ಟೆಸ್ಲಾ, ಟ್ವಿಟರ್ ಷೇರು ಕುಸಿತ
ಈ ವಾರ ಟ್ವಿಟರ್ ಮತ್ತು ಟೆಸ್ಲಾದ ಷೇರುಗಳ ದರ ಕುಸಿದಿದೆ. ಟ್ವಿಟರ್ ಖರೀದಿಸುವ ಮೆಗಾ ಡೀಲ್ ಸುತ್ತ ಕಾನೂನು ವಿವಾದಗಳು ಸುತ್ತಿಕೊಳ್ಳುವ ನಿರೀಕ್ಷೆ ಉಂಟಾಗಿದೆ. ಟ್ವಿಟರ್ ಷೇರು ದರ ಶೇ.೯.೫ ಹಾಗೂ ಟೆಸ್ಲಾ ಷೇರು ದರ ಶೇ.16ರಷ್ಟು ಕುಸಿದಿದೆ.