ಸ್ಯಾನ್ ಫ್ರಾನ್ಸಿಸ್ಕೊ: ಅಮೆರಿಕದ ಎಲೆಕ್ಟ್ರಿಕ್ ಕಾರುಗಳ ಉತ್ಪಾದಕ ಟೆಸ್ಲೊ ಕಂಪನಿಯಲ್ಲಿ ಶೇ.10ರಷ್ಟು ಉದ್ಯೋಗ ಕಡಿತಕ್ಕೆ ಕಂಪನಿಯ ಸಿಇಒ ಎಲಾನ್ ಮಸ್ಕ್ ಚಿಂತನೆ ನಡೆಸಿದ್ದಾರೆ. ಕಂಪನಿ ತನ್ನ ಎಲ್ಲ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ.
ಟೆಸ್ಲಾದಲ್ಲಿ 1 ಲಕ್ಷ ಉದ್ಯೋಗಿಗಳಿದ್ದು, ಇವರಲ್ಲಿ ಶೇ.10 ಎಂದರೆ 10 ಸಾವಿರ ಮಂದಿ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲು ಎಲಾನ್ ಮಸ್ಕ್ ಆಲೋಚಿಸಿದ್ದಾರೆ.
ಟೆಸ್ಲಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಕಚೇರಿಗೆ ಬನ್ನಿ ಇಲ್ಲವೇ ಕಂಪನಿ ಬಿಟ್ಟು ಹೋಗಿ ಎಂದು ಇತ್ತೀಚೆಗೆ ಸಂದೇಶ ರವಾನಿಸಿತ್ತು. ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಗೆ ಬಂದು ಕೆಲಸ ಮಾಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ನಡೆಯಬಹುದು ಎಂದು ಎಲಾನ್ ಮಸ್ಕ್ ಉದ್ಯೋಗಿಗಳಿಗೆ ಹೇಳಿದ್ದರು.
ಉದ್ಯೋಗ ಕಡಿತ ಚಿಂತನೆಗೆ ಸಂಬಂಧಿಸಿ ಟೆಸ್ಲಾ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಮಾಧ್ಯಮ ಸಂಸ್ಥೆಯೊಂದಕ್ಕೆ ಇ-ಮೇಲ್‌ನಲ್ಲಿ ಎಲಾನ್ ಮಸ್ಕ್ ಈ ವಿಷಯ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಆರ್ಥಿಕತೆ ಬಗ್ಗೆ ಮಸ್ಕ್ ಕಳವಳ
ಅಮೆರಿಕದ ಆರ್ಥಿಕತೆಯ ಪರಿಸ್ಥಿತಿ ಅತ್ಯಂತ ಕಳಪೆಯಾಗಿದೆ ಎಂದು ಎಲಾನ್ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಈಗಾಗಲೇ ಉಂಟಾಗಿದೆ, ಅಥವಾ ಅದರತ್ತ ಕುಸಿಯುತ್ತಿದೆ. ಹೀಗಾಗಿ ಟೆಸ್ಲಾದಲ್ಲಿ ಉದ್ಯೋಗ ಕಡಿತ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಆದರೆ ಮಸ್ಕ್ ಅವರ ಕಳವಳಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೊ ಬೈಡೆನ್, ಮಸ್ಕ್ ಅವರ ಚಂದ್ರಯಾನಕ್ಕೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಮಸ್ಕ್ ಆರೋಪವನ್ನು ನಿರಾಕರಿಸಿರುವ ಬೈಡೆನ್, ನಾನಾ ಕಂಪನಿಗಳಿಂದ ಅಮೆರಿಕದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳವಾಗಿರುವುದನ್ನು ಪಟ್ಟಿ ಸಹಿತ ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲು ಕಾರು ಮಾರಾಟ, ಸರ್ವೀಸ್‌ಗೆ ಅನುಮತಿ ನೀಡದಿದ್ದರೆ ಭಾರತದಲ್ಲಿ ಟೆಸ್ಲಾ ಉತ್ಪಾದನೆ ಇಲ್ಲ ಎಂದ ಎಲಾನ್ ಮಸ್ಕ್