Site icon Vistara News

ELSS Funds : ತೆರಿಗೆ ಉಳಿತಾಯದ ಜತೆಗೆ ಶ್ರೀಮಂತರಾಗಲು ಸಹಕರಿಸುವ ಮ್ಯೂಚುವಲ್‌ ಫಂಡ್‌ ಯಾವುದು?

mutual fund

ನಿಮಗೆ ಒಂದು ಕಡೆ ಆದಾಯ ತೆರಿಗೆಯಲ್ಲಿ ( ELSS Funds )ಉಳಿತಾಯ ಮಾಡಲು ಸಹಕರಿಸುವ ಹಾಗೂ ಮತ್ತೊಂದು ಕಡೆ ಶ್ರೀಮಂತರಾಗಲು ಸಂಪತ್ತನ್ನು ಸೃಷ್ಟಿಸಿಕೊಡುವ ಮ್ಯೂಚುವಲ್‌ ಫಂಡ್‌ ಸ್ಕೀಮ್‌ ಯಾವುದಿದೆ ಎನ್ನುತ್ತೀರಾ? ಈ ಪ್ರಶ್ನೆಗೆ ಉತ್ತರವೇ ಈಕ್ವಿಟಿ ಲಿಂಕ್ಡ್‌ ಸೇವಿಂಗ್ಸ್‌ ಸ್ಕೀಮ್ಸ್‌ ( Equity Linked Savings Schemes ) ಸಂಕ್ಷಿಪ್ತವಾಗಿ ಇದನ್ನು ಇಎಲ್‌ಎಸ್‌ಎಸ್‌ ಫಂಡ್‌ ಎಂದೂ ಕರೆಯುತ್ತಾರೆ.

ಇಎಲ್‌ಎಸ್‌ಎಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಲಾಭವನ್ನು ನೀವು ಗಳಿಸಬಹುದು. ಹೀಗಾಗಿ ದೀರ್ಘಕಾಲೀನವಾಗಿ ಎರಡು ಲಾಭ ನಿಮ್ಮದಾಗುತ್ತದೆ. ಒಂದು ಕಡೆ ತೆರಿಗೆಯಲ್ಲಿ ಉಳಿತಾಯದಿಂದ ಸಿಗುವ ಹಣವಾದರೆ, ಮತ್ತೊಂದು ಕಡೆ ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಬೆಳೆಯುವ ಸಂಪತ್ತು. ಇಎಲ್‌ಎಸ್‌ಎಸ್‌ ಕ್ಲೋಸ್ -ಎಂಡೆಡ್‌ ಹೂಡಿಕೆಯ ಆಯ್ಕೆಯಾಗಿದ್ದು, ಮೂರು ವರ್ಷಗಳ ಲಾಕ್‌ ಇನ್‌ ಅವಧಿಯನ್ನು ಒಳಗೊಂಡಿದೆ. ಟ್ಯಾಕ್ಸ್‌ ರಿಲೀಫ್‌ ನೀಡುವ ಇತರ ಆಯ್ಕೆಗಳ ಪೈಕಿ ಇದು ಸಣ್ಣ ಲಾಕ್‌ ಇನ್‌ ಅವಧಿಯಾಗಿದೆ. ಹೀಗಾಗಿ ಎನ್‌ಎಸ್‌ಸಿ, ಪಿಪಿಎಫ್‌ ಮತ್ತು ಎನ್‌ಪಿಎಸ್‌ಗೆ ಹೋಲಿಸಿದರೆ ಹೆಚ್ಚು ಲಿಕ್ವಿಡಿಟಿಯನ್ನು ಒಳಗೊಂಡಿದೆ. ಅವುಗಳೆಲ್ಲವೂ ಐದು ವರ್ಷಕ್ಕೂ ಹೆಚ್ಚಿನ ಲಾಕ್‌ ಇನ್‌ ಅವಧಿಯನ್ನು ಹೊಂದಿದೆ. ಇಎಲ್‌ಎಸ್‌ಎಸ್‌ ಅಡಿಯಲ್ಲಿ ಸಿಪ್‌ (ಎಸ್‌ಐಪಿ) ಮೂಲಕ ಅಥವಾ ಲಂಪ್ಸಮ್‌ ಆಗಿಯೂ ಹೂಡಿಕೆ ಮಾಡಬಹುದು.

ಗರಿಷ್ಠ ತೆರಿಗೆ ವಿನಾಯಿತಿ ಮಿತಿ: ಸೆಕ್ಷನ್‌ 80 ಸಿ ಅಡಿಯಲ್ಲಿ ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫಂಡ್‌ (ಇಪಿಎಫ್)‌, ಜೀವ ವಿಮೆ ಪಾಲಿಸಿಯ ಮೂಲಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಗರಿಷ್ಠ ವಾರ್ಷಿಕ 1.5 ಲಕ್ಷ ರೂ. ತನಕ ಹೂಡಿಕೆಗೆ ಟ್ಯಾಕ್ಸ್‌ ರಿಲೀಫ್‌ ಪಡೆಯಬಹುದು. ನೀವು ಈಗಾಗಲೇ ಇತರ ಆಯ್ಕೆಗಳ ಮೂಲಕ ಕೆಲ ವಿನಾಯಿತಿ ಪಡೆದಿದ್ದರೆ ಇಎಲ್‌ಎಸ್‌ಎಸ್‌ ನಲ್ಲಿ ಡಿಡಕ್ಷನ್‌ ಸಂಪೂರ್ಣವಾಗಿ ಸಿಗದು. ಆದ್ದರಿಂದ ತೆರಿಗೆ ಕಡಿತಕ್ಕಾಗಿಯೇ ಇಎಲ್‌ ಎಸ್‌ಎಸ್‌ನಲ್ಲಿ ಹೂಡಿಕೆ ಮಾಡುವುದಿದ್ದರೆ ಕೆಲವು ಬೇಸಿಕ್‌ ಲೆಕ್ಕಾಚಾರಗಳನ್ನು ಮಾಡಿದ ಬಳಿಕ ನಿರ್ಧಾರ ತೆಗೆದುಕೊಳ್ಳಿರಿ.

ಇದನ್ನೂ ಓದಿ : Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ನೀವು ಎಫ್‌ಡಿ, ಪಿಪಿಎಫ್‌ನಲ್ಲಿ ಹೂಡಿದರೆ ಸಿಗುವುದಕ್ಕಿಂತ ಹೆಚ್ಚು ಆದಾಯವನ್ನು ಇಎಲ್‌ಎಸ್‌ಎಸ್‌ ಫಂಡ್‌ನಲ್ಲಿ ಗಳಿಸಬಹುದು. ಇಎಲ್‌ಎಸ್‌ಎಸ್‌ನಲ್ಲಿ ತಿಂಗಳಿಗೆ 100 ರೂ.ನಿಂದಲೂ ಹೂಡಿಕೆ ಆರಂಭಿಸಬಹುದು. ಇಎಲ್‌ಎಸ್‌ಎಸ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ 65% ಭಾಗವನ್ನು ಈಕ್ವಿಟಿಗಳು ಮತ್ತು ಈಕ್ವಿಟಿ ಲಿಂಕ್ಡ್‌ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಮೂರು ವರ್ಷಗಳಲ್ಲಿ 15%ರಿಂದ 18% ಆದಾಯವನ್ನು ಇಎಲ್‌ಎಸ್‌ಎಸ್‌ ಫಂಡ್‌ಗಳು ನೀಡುತ್ತವೆ.

ELSS ಮ್ಯೂಚುವಲ್‌ ಫಂಡ್‌ಗಳ ಪ್ರಯೋಜನಗಳು
1. ಸೆಕ್ಷನ್‌ 80 ಸಿ ಅಡಿಯಲ್ಲಿ ವರ್ಷಕ್ಕೆ 1,50,000 ರೂ. ತನಕ ಹೂಡಿಕೆಗೆ ತೆರಿಗೆ ಉಳಿತಾಯ
2. ಮೂರು ವರ್ಷಗಳ ಕನಿಷ್ಠ ಲಾಕ್‌ ಇನ್‌ ಅವಧಿ
3. ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು, ಗರಿಷ್ಠ ಮಿತಿ ಇಲ್ಲ
4. ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಉಳಿತಾಯ-ತೆರಿಗೆ ಉಳಿತಾಯ ಎರಡಕ್ಕೂ ಅನುಕೂಲಕರ.
5. ಈಕ್ವಿಟಿಗಳಲ್ಲಿ ಹೆಚ್ಚಿನ ಹೂಡಿಕೆಯಾದ್ದರಿಂದ ಎಫ್‌ಡಿಗಿಂತ ಹೆಚ್ಚು ಆದಾಯ ಗಳಿಕೆ ಸಂಭವ
Exit mobile version