Site icon Vistara News

Loan Tips: ಗೃಹ ಸಾಲ ಬೇಗ ಬೇಗನೆ ತೀರಿಸಿರಿ, ಇಲ್ಲಿದೆ ಹಲವು ದಾರಿ

home loan

ನಿಮ್ಮ ಜೀವನದ ಮಹೋನ್ನತ ಕನಸುಗಳಲ್ಲಿ ಒಂದಾದ ಸ್ವಂತ ಮನೆಯನ್ನು ಹೊಂದಬೇಕೆಂಬ ಬಯಕೆ ಈಗ ಈಡೇರಿದೆ. ಇದಕ್ಕಾಗಿ ನೀವು ಗೃಹ ಸಾಲ ಮಾಡಿದ್ದೀರಿ. ಈಗ ನಿಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಈ ಸಾಲವನ್ನು ತೀರಿಸುವುದು. ಮನೆ ಕೊಳ್ಳಲು ಪ್ಲಾನ್‌ ಮಾಡಿಕೊಂಡಂತೆ ಸಾಲ ತೀರಿಸಲೂ ನೀವು ಸರಿಯಾದ ಪ್ಲಾನ್‌ ಮಾಡಿಕೊಳ್ಳದಿದ್ದರೆ ಈ ಸಾಲವೇ ಶೂಲವಾಗಿ ತಿವಿಯಬಹುದು.

ನಿಮ್ಮ ಹಾಗೆಯೇ ಬೆಂಗಳೂರಿನ ಹೆಸರಾಂತ ಐಟಿ ಕಂಪನಿಯ ಉದ್ಯೋಗಿ ಕೆ. ರಾಜೀವ್‌ ಕುಮಾರ್‌ ಗೃಹ ಸಾಲ ಮಾಡಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದರು. ಈಗ ನಿಗದಿತ ಅವಧಿಗಿಂತಲೂ ಮೊದಲೇ ಸಾಲ ತೀರಿಸಿ, ನಿಜವಾದ ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದಾರೆ. ಅದಕ್ಕೆ ಅವರು ಸಾಲ ತೀರಿಸಲು ಪಕ್ಕಾ ಪ್ಲಾನ್‌ ಕೂಡ ಮಾಡಿಕೊಂಡಿದ್ದರು. ʼ‘ಸಾಲ  ಮರುಪಾವತಿ ನನ್ನ ಪ್ರಮುಖ ಆದ್ಯತೆಯಾಗಿತ್ತು. ಸಾಲ ಅನುಮೋದನೆಯಾಗುವ ಮುನ್ನವೇ ನಾನು ಈ ಬಗ್ಗೆ ಯೋಚಿಸಲು ಆರಂಭಿಸಿದ್ದೆ. ಏಕೆಂದರೆ ನಾನು ಇಷ್ಟೊಂದು ದೊಡ್ಡ ಮೊತ್ತದ ಸಾಲ ಮಾಡಿದ್ದು ಜೀವನದಲ್ಲಿ ಇದೇ ಮೊದಲಬಾರಿʼʼ ಎಂದು ಅವರು ತಾವು ಸಾಲ ತೀರಿಸಿದ ಕತೆಯನ್ನು ಹಂಚಿಕೊಂಡಿದ್ದಾರೆ.

ʼʼನಾನಿನ್ನೂ ಕಟ್ಟುತ್ತಿದ್ದ ಅಪರ್ಟ್‌ಮೆಂಟ್‌ಗೆ ಸಾಲ ಮಾಡಿದ್ದೆ. ಹೀಗಾಗಿ ಇಎಂಐ ಕಟ್ಟಲು 15 ತಿಂಗಳ ಬಿಡುವಿತ್ತು. ಸಾಲ ಬಿಡುಗಡೆಯಾದ ಮೊತ್ತಕ್ಕೆ ಬಡ್ಡಿ ಪಾವತಿಸಿದರೆ ಸಾಕಾಗಿತ್ತು. ಈ 15 ತಿಂಗಳಲ್ಲಿ ಮುಂದಿನ ಒಂದು ವರ್ಷಕ್ಕೆ ಸಾಕಾಗುವಷ್ಟು ಹಣವನ್ನು ನಾನು ಒಟ್ಟುಮಾಡಿಕೊಂಡಿದ್ದೆ. ಇದರಿಂದ ನನಗೆ ಸಾಲ ತೀರಿಸುವುದು ಹೇಗೆಂಬ ಭಯ ದೂರವಾಯಿತುʼʼ ಎಂದು ಅವರು ವಿವರಿಸಿದ್ದಾರೆ. 

ಒಂದು ಇಎಂಐ ಪಾವತಿಸದಿದ್ದರೂ ನಮ್ಮ ಕ್ರೆಡಿಟ್ ಸ್ಕೋರ್ ಸೊರಗುತ್ತದೆ. ಆದ್ದರಿಂದ ಸಾಲವನ್ನು ನಮ್ಮ ಜೇಬಿಗೆ ಭಾರವಾಗದಂತೆ ನಿಭಾಯಿಸುವುದು ಬಹಳ ಮುಖ್ಯ. ಕ್ರೆಡಿಟ್‌ ಸ್ಕೋರ್‌ ಸಾಲದ ವಿಷಯದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿವರಿಸುವ ಕೆ. ರಾಜೀವ್‌ ಕುಮಾರ್‌, ನಾನು ಮನೆ ಕೊಂಡ ನಂತರ ಇಂಟೀರಿಯರ್‌ ವಿಷಯದಲ್ಲಿ ಲೆಕ್ಕಾಚಾರ ತಪ್ಪಿ, ನಾಲ್ಕು ಲಕ್ಷ ಪರ್ಸನಲ್‌ ಲೋನ್‌ ಮಾಡಿದ್ದೆ. ಹೀಗಾಗಿ ಮೊದಲಿಗೆ  ದುಬಾರಿ ಸಾಲವಾದ ಇದರ ಮರುಪಾವತಿಗೆ  ಗಮನ ನೀಡಿದೆ ಎಂದಿದ್ದಾರೆ.

ಇತರೆ ಸಾಲಗಳನ್ನು ಕಡೆಗಣಿಸದೆ ದುಬಾರಿ ಸಾಲಗಳಿಗೆ ನಮಗೆ ಸಾಧ್ಯವಿರುವ ಹೆಚ್ಚು ಮೊತ್ತವನ್ನು ಪಾವತಿಸಬೇಕು. ದುಬಾರಿ ಸಾಲ ಮರುಪಾವತಿಯಾದ ನಂತರ ಮುಂದಿನ ಸಾಲವನ್ನು ಗಮನನೀಡಬೇಕು.
ದುಬಾರಿ ಸಾಲಗಳನ್ನು ಮೊದಲು ಪಾವತಿಸಿದರೆ ಎಲ್ಲ ಸಾಲಗಳ ಬಡ್ಡಿಯ ಹೊರೆ ಕಡಿಮೆಯಾಗುತ್ತದೆ. ನಿಮ್ಮ ಭವಿಷ್ಯ ಸುಭದ್ರವಾಗಿರುತ್ತದೆ. ಆದರೆ ಗೃಹ ಸಾಲದ ಇಎಂಐ ಮತ್ತಿತರೆ ಸಾಲಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಸಲಹೆ ನೀಡುತ್ತಾರೆ.

ಆದಾಯಕ್ಕೆ ತಕ್ಕಂತೆ ಮರುಪಾವತಿ

ಸಾಲ ತೀರಿಸಲು ನಾನು ಮಾಡಿದ ಮತ್ತೊಂದು ಟ್ರಿಕ್‌ ಎಂದರೆ ನನ್ನ ವೇತನ ಹೆಚ್ಚಾದಂತೆ ಇಎಂಐ ಮೊತ್ತವನ್ನು ಹೆಚ್ಚಿಸಿಕೊಂಡಿದ್ದು, ನಿಮ್ಮ ಸಾಲವನ್ನು ವೇಗವಾಗಿ ತೀರಿಸಲು ನಿಮ್ಮ ಆದಾಯ ಹೆಚ್ಚಿದಂತೆ ಇಎಂಐ ಹೆಚ್ಚಿಸಿಕೊಳ್ಳಿ. ವೇತನದಲ್ಲಿ ಶೇ.8ರಷ್ಟು ಹೆಚ್ಚಳ ಪಡೆದರೆ ಶೇ.5ರಷ್ಟು ಇಎಂಐ ಹೆಚ್ಚಿಸುವುದು ಉತ್ತಮ ಎನ್ನುತ್ತಾರೆ ರಾಜೀವ್‌ ಕುಮಾರ್‌. ಈ ರೀತಿ ಇಎಂಐ ಹೆಚ್ಚಿಸಿದರೆ ಸಾಲ ನಿಗದಿಗಿಂತಲೂ ಬಹಳ ಮೊದಲೇ ತೀರಿಸಬಹುದು.

ನಿಮಗೆ ಒಳ್ಳೆಯ ಬೋನಸ್ ದೊರೆತಿದೆಯೇ? ಅದರಿಂದ ಹೊಸ ಎಲ್‌ಇಡಿ ಟೀವಿ ಅಥವಾ ಸ್ಮಾರ್ಟ್‌ಫೋನ್‌ ಖರೀದಿಸಬೇಡಿ. ಅದನ್ನು ನಿಮ್ಮ ಸಾಲ ಮರುಪಾವತಿಗೆ ಬಳಸಿಕೊಳ್ಳಿ. ಆದಾಯ ತೆರಿಗೆ ರೀಫಂಡ್, ವಿಮೆ ಪಾಲಿಸಿಗಳು, ಬಾಂಡ್‌ಗಳ ಮೆಚ್ಯುರಿಟಿ ಹಣವನ್ನು ದುಬಾರಿ ಸಾಲಗಳ ಮರುಪಾವತಿಗೆ ಬಳಸಿಕೊಳ್ಳಿ. ಅದೆಲ್ಲಾ ತೀರುತ್ತಿದ್ದಂತೆಯೇ ಗೃಹ ಸಾಲದ ಪ್ರಿನ್ಸಿಪಲ್‌ ಅಮೌಂಟ್‌ಗೆ ಕಟ್ಟಿ, ಸಾಲದ ಮೊತ್ತ ಕಡಿಮೆ ಮಾಡಿಕೊಳ್ಳಿ ಎಂದು ಅವರು ಟಿಪ್ಸ್‌ ನೀಡಿದ್ದಾರೆ.

ದಂಡ ವಿಧಿಸದಂತೆ ನೋಡಿಕೊಳ್ಳಿ

ಕೆಲವು  ಬ್ಯಾಂಕ್‌ಗಳು ಸಾಲದ ಅವಧಿಪೂರ್ವ ಮರುಪಾವತಿಗೆ ದಂಡ ವಿಧಿಸುತ್ತವೆ. ಈ ಬಗ್ಗೆ ಬ್ಯಾಂಕಿನಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಈ ರೀತಿ ದಂಡ ವಿಧಿಸದಂತೆ ಬ್ಯಾಂಕಿಗೆ ಮನವಿ ಮಾಡಿಕೊಳ್ಳಬಹುದು. ಆರ್‌ಬಿಐ ದಂಡ ವಿಧಿಸಬಾರದು ಎಂದು ಆಗಾಗ ಸೂಚಿಸುತ್ತಲೇ ಇರುತ್ತದೆ. ದಂಡ ಪಾವತಿಸಬೇಕಿದ್ದರೆ ನೀವು ಉಳಿಸುವ ಬಡ್ಡಿಯನ್ನು ಲೆಕ್ಕ ಹಾಕಿಕೊಳ್ಳಿ ನಿರ್ಧಾರ ತೆಗೆದುಕೊಳ್ಳಬಹುದು.

ಬಡ್ಡಿ ಲೆಕ್ಕಾಚಾರ ಹಾಕಿ, ಸಾಲ ತೀರಿಸಿ

ಈಗ ನಿಮ್ಮ ಗೃಹಸಾಲದ ಮೇಲಿನ ಬಡ್ಡಿದರ ಕಡಿಮೆಯಾಗಿದೆ. ನಿಮ್ಮ ಹೂಡಿಕೆಗಳನ್ನು ಪಟ್ಟಿ ಮಾಡಿ, ಅದಕ್ಕೆ ಎಷ್ಟು ಬಡ್ಡಿ ದೊರೆಯುತ್ತಿದೆ ಎಂದು ನೋಡಿ. ಹೂಡಿಕೆಯ ಬಡ್ಡಿಯು ನೀವು ಕಟ್ಟುತ್ತಿರುವ ಗೃಹ ಸಾಲದ ಬಡ್ಡಿದರಕ್ಕಿಂತ ಕಡಿಮೆ ಇದ್ದರೆ ಹೂಡಿಕೆಯ ಮೊತ್ತವನ್ನು ಸಾಲ ತೀರಿಸಲು ಬಳಸುವುದೇ ಸೂಕ್ತ. ಆದರೆ ಆಪತ್ಕಾಲಕ್ಕೆಂದು ತೆಗೆದಿರಿಸಿದ ಹಣವನ್ನು ಹೀಗೆ ಸಾಲ ತೀರಿಸಲು ಬಳಸಬಾರದು. ನಿಮ್ಮ ವಿಮೆ ಹಣ ಅಥವಾ ಪಿಎಫ್‌ ತೆಗೆದುಕೊಂಡು ಸಾಲ ಮರುಪಾವತಿ ಮಾಡಬಹುದು.

ಇಎಂಐ ಮೊತ್ತ ಕಡಿಮೆಮಾಡಿಕೊಳ್ಳಬೇಡಿ!

ನಿಮಗೆ ಪ್ರಧಾನಮಂತ್ರಿ ಅವಾಸ್‌ ಯೋಜನೆ (PMAY) ಯಿಂದಲೋ ಅಥವಾ ನಿಮ್ಮ ಪೋಷಕರಿಂದಲೋ ದೊಡ್ಡ ಮೊತ್ತದ ಹಣ ದೊರೆಯಿತೆಂದಿಟ್ಟುಕೊಳ್ಳಿ. ಅದನ್ನು ನೀವು ನಿಮ್ಮ ಗೃಹ ಸಾಲವನ್ನು ತೀರಿಸಲು ಬಳಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಬ್ಯಾಂಕಿನವರು, ಇದನ್ನು ಇಎಂಐ ಕಡಿಮೆ ಮಾಡುವುದೋ, ಅಥವಾ ಪ್ರಿನ್ಸಿಪಲ್‌ ಅಮೌಂಟ್‌ಗೆ ಸೇರಿಸುವುದೋ ಕೇಳುತ್ತಾರೆ. ಆಗ ನೀವು ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಳ್ಳಬೇಕು. ಇಎಂಐ ಮೊತ್ತ ಕಡಿಮೆಯಾದರೆ ಈಗ ಒಳ್ಳೆಯದು ಅನಿಸುತ್ತದೆ. ಆದರೆ ಸಾಲದ ಹೊರೆ ಕಡಿಮೆಯಾಗುವುದೇ ಇಲ್ಲ. ಹೀಗಾಗಿ ಇಂತಹ ಸಂರ್ಭದಲ್ಲಿ ತಜ್ಞರ ಸಲಹೆ ಪಡೆದು ತೀರ್ಮಾನ ತೆಗೆದುಕೊಂಡರೆ ಒಳ್ಳೆಯದು.
ನಿಮ್ಮ ಇಎಂಐ ಮೊತ್ತಕ್ಕಿಂತ ಹೆಚ್ಚು ಪಾವತಿಸಲು ಸಾಧ್ಯವಿದ್ದರೆ ಪ್ರೀಪೇಮೆಂಟ್‌ ಅವಕಾಶ ಬಳಸಿಕೊಳ್ಳಿ.  ಈ ರೀತಿ ನೀವು ಹೆಚ್ಚುವರಿಯಾಗಿ ಪಾವತಿಸುವ ಹಣವು ಪ್ರಿನ್ಸಿಪಲ್‌ ಅಮೌಂಟ್‌ ಅನ್ನು ಕಡಿಮೆ ಮಾಡುತ್ತದೆ. ನೀವು ನಿಗದಿತವಾಗಿ ಪ್ರೀಪೇಮೆಂಟ್‌ ಮಾಡುವುದರಿಂದ ದೊಡ್ಡ ಮೊತ್ತವನ್ನು ಉಳಿಸಬಹುದಾಗಿದೆ.

ಜೀವನಶೈಲಿ ಬದಲಾಗಲಿ

ನಿಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಸಾಲವನ್ನು ಬಹುಬೇಗನೆ ತೀರಿಸಬಹುದು. ಸಾಲಗಳು ತೀರುವವರೆಗೂ ದುಬಾರಿ ಪ್ರವಾಸ ಇತ್ಯಾದಿಗಳಿಗಳಿಂದ ದೂರ ಉಳಿದರೇ ಒಳ್ಳೆಯದು.

ಇದನ್ನೂ ಓದಿ | Home loan: ಮನೆಕೊಳ್ಳಲು ಇದು ಸೂಕ್ತ ಸಮಯ, ಆದರೆ ಈ ವಿಷಯಗಳನ್ನು ಮರೆಯಬೇಡಿ!

ಅಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸದೆ ಆದಷ್ಟು ನಗದು ಬಳಸಬೇಕು. ಇದರಿಂದ ನಿಮ್ಮ ಖರ್ಚು ಮಾಡುವ ಉಮೇದು ಕಡಿಮೆಯಾಗುತ್ತದೆ. ರಜಾಮೋಜಿನ ಯೋಜನೆಗಳನ್ನು ಸಾಲದ ಮರುಪಾವತಿಯಾಗುವವರೆಗೂ ಮುಂದೂಡಿ. ಹೊಸ ಸಾಲಗಳನ್ನು ಪಡೆಯುವುದನ್ನು ತಪ್ಪಿಸಿ. ಈ ರೀತಿ ಹಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದರಿಂದ ನೀವು ನಿಮ್ಮ ತಲೆಯ ಮೇಲಿರುವ ಸಾಲದ ಹೊರೆಯನ್ನು ಕೊಂಚವಾದರೂ ಇಳಿಸಿಕೊಳ್ಳಬಹುದು.

Exit mobile version