ನವ ದೆಹಲಿ: ಕಳೆದ ಜೂನ್‌ನಲ್ಲಿ ತೀವ್ರ ಕುಸಿತಕ್ಕೀಡಾಗಿದ್ದ ಉದ್ಯೋಗಾವಕಾಶಗಳ ಟ್ರೆಂಡ್, ಜುಲೈನಲ್ಲಿ ಚೇತರಿಸಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (ಸಿಎಂಐಇ) ಸಮೀಕ್ಷೆ ತಿಳಿಸಿದೆ.
ಜುಲೈ ೧೨ರಿಂದ ಮೂರು ದಿನಗಳಲ್ಲಿ ನಿರುದ್ಯೋಗದ ಪ್ರಮಾಣದಲ್ಲಿ ಕ್ರಮೇಣ ಇಳಿಕೆ ದಾಖಲಾಗಿದೆ. ಜುಲೈ ೧೨ರಂದು ೭.೩೩%, ಜುಲೈ ೧೩ರಂದು ೭.೪೬%, ಜುಲೈ ೧೪ರಂದು ೭.೨೯%ಕ್ಕೆ ಇಳಿಕೆಯಾಗಿದೆ ಎಂದು ಸಿಎಂಐಇ ವರದಿ ತಿಳಿಸಿದೆ.
ಜೂನ್‌ನಲ್ಲಿ ೧.೩ ಕೋಟಿ ಉದ್ಯೋಗ ನಷ್ಟ
ಜೂನ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭.೮೦% ನಿರುದ್ಯೋಗ ದರವಿತ್ತು. ನಗರ ಪ್ರದೇಶದಲ್ಲಿ ೭.೩೦ ಮತ್ತು ಗ್ರಾಮೀಣ ಪ್ರದೇಶದಲ್ಲಿ ೮.೦೩%ರ ಪ್ರಮಾಣವಿತ್ತು. ಸಂಸ್ಥೆಯ ವರದಿ ಪ್ರಕಾರ ಜೂನ್‌ನಲ್ಲಿ ನಿರುದ್ಯೋಗ ತೀವ್ರವಾಗಿತ್ತು. ಉದ್ಯೋಗಗಳ ಸಂಖ್ಯೆಯಲ್ಲಿ ೧.೩ ಕೋಟಿ ಇಳಿಕೆಯಾಗಿತ್ತು. ೨೦೨೨ರ ಮೇನಲ್ಲಿ ೪೦.೪ ಕೋಟಿ ಇದ್ದ ಉದ್ಯೋಗಗಳ ಸಂಖ್ಯೆ ೩೯ ಕೋಟಿಗೆ ಕುಸಿದಿತ್ತು.
ಕೌಶಲ ಹೊಂದಿರುವವರ ಕೊರತೆ : ಭಾರತದಲ್ಲಿ ೨೦೨0 ಮತ್ತು ೨೦೨೧ರ ನಡುವೆ ನಿರುದ್ಯೋಗದ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದರೂ, ಇನ್ನೂ ಕಳವಳಕಾರಿ ಮಟ್ಟದಲ್ಲಿಯೇ ಇದೆ. ದುರದೃಷ್ಟವಶಾತ್ ಭಾರತದ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ೨೦೨೦-೨೦೨೧ರ ಅವಧಿಯಲ್ಲಿ ೨೫%ರಿಂದ ೨೮%ಕ್ಕೆ ವೃದ್ಧಿಸಿದೆ. ಮುಖ್ಯವಾಗಿ ೧೮ ಮತ್ತು ೨೪ ವರ್ಷ ವಯೋಮಿತಿಯ ಯುವಜನರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸೂಕ್ತ ಕೌಶಲದ ಕೊರತೆ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ಹೀಗಾಗಿ ೧೮-೨೪ ವರ್ಷ ವಯೋಮಿತಿಯ ಯುವಜನರಿಗೆ ತಮ್ಮ ಕುಟುಂಬದ ಬೆಂಬಲ ಬೇಕಾಗುತ್ತಿದೆ. ಸಂಘಟಿತ ವಲಯದಲ್ಲಿ ಉದ್ಯೋಗ ಸಿಗದಿದ್ದಾಗ ಅಸಂಘಟಿತ ವಲಯದಲ್ಲಿ ದುಡಿಯುತ್ತಾರೆ. ಅಂಥ ಸಂದರ್ಭದಲ್ಲಿ ಬಡತನವೂ ಹೆಚ್ಚಿರುತ್ತದೆ. ಹೀಗಾಗಿ ಕುಟುಂಬದ ಬೆಂಬಲ ಅನಿವಾರ್ಯವಾಗುತ್ತದೆ. ಕೌಶಲದ ಕೊರತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಯೋಜನೆಯನ್ನು ೨೦೧೫ರಲ್ಲಿ ಜಾರಿಗೊಳಿಸಲಾಗಿದೆ. ಭಾರತದಲ್ಲಿ ಶಿಕ್ಷಣದ ಜತೆಗೆ ವೃತ್ತಿಪರ ತರಬೇತಿಗಳನ್ನೂ ನೀಡಬೇಕು. ಇದರಿಂದ ಯುವಜನತೆಗೆ ಉದ್ಯೋಗಾವಕಾಶಗಳು ವೃದ್ಧಿಸಬಹುದು. ಡಿಜಿಟಲೀಕರಣ, ಆಟೊಮೇಶನ್, ಕೃತಕಬುದ್ಧಿಮತ್ತೆಯಿಂದ ಉದ್ಯಮ ವಲಯದಲ್ಲಿ ಉಂಟಾಗುತ್ತಿರುವ ಬದಲಾವಣೆಯನ್ನು ಗಮನಿಸಿ ಶಿಕ್ಷಣದ ಸುಧಾರಣೆ ಅಗತ್ಯ ಎನ್ನುತ್ತಾರೆ ತಜ್ಞರು.
CMIE ಪ್ರಕಾರ ನಿರುದ್ಯೋಗದ ಪ್ರಮಾಣ
- ೨೦೨೨ ಜನವರಿ: 6.57
- ಫೆಬ್ರವರಿ: 8.1%
- ಮಾರ್ಚ್: 7.60%
- ಏಪ್ರಿಲ್: 7.83%
- ಮೇ : 7.12%
- ಜೂನ್: ೭.೮೦%